ವಾಷಿಂಗ್ಟನ್, ಜೂನ್ 2 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಅಮೆರಿಕದಲ್ಲಿ ಶಾಂತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯುಎಸ್ ಮಿಲಿಟರಿ ಪಡೆಗಳನ್ನು ಪಟ್ಟಣಗಳು ಮತ್ತು ನಗರಗಳಲ್ಲಿ ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆಫ್ರಿಕನ್ ಅಮೆರಿಕನ್ ವ್ಯಕ್ತಿಯೊಬ್ಬರ ಸಾವಿಗೆ ಪೊಲೀಸ್ ಅಧಿಕಾರಿ ಕಾರಣವೆಂದು ನಡೆದ ಪ್ರತಿಭಟನೆಯಲ್ಲಿನ ಹಿಂಸಾಚಾರ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳು ತಡೆಯಲು ವಿಫಲರಾಗಿದ್ದು, ಇದನ್ನು ಭಯೋತ್ಪಾದನೆ ಎಂದು ಟ್ರಂಪ್ ವರ್ಣಿಸಿದ್ದಾರೆ.
ಶ್ವೇತಭವನದ ಭಾಷಣದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ಗಾರ್ಡ್ನ ಮಿಲಿಟರಿ ಪಡೆಗಳನ್ನು ಅಲ್ಲಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲು ರಾಜ್ಯದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದು, ಸಂಬಂಧ ಪಟ್ಟ ರಾಜ್ಯವು ಅದನ್ನು ನಿರಾಕರಿಸಿದರೆ ನಾನು ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯನ್ನು ನಿಯೋಜಿಸುತ್ತೇನೆ ಮತ್ತು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುತ್ತೇನೆ ಎಂದು ಹೇಳಿದರು.
ಪ್ರತಿಭಟನಾಕಾರರಿಗೆ ಅಮೆರಿಕದ ಅಧ್ಯಕ್ಷ ಟ್ರಂಪ್, ಈ ಭಯೋತ್ಪಾದನೆಯ ಸಂಘಟಕರಾದ ನೀವು ಕಠಿಣ ಶಿಕ್ಷೆ ಮತ್ತು ಜೈಲಿನಲ್ಲಿ ಸುದೀರ್ಘ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ಹೇಳಿದರು. ಅವರು ಮಾತನಾಡುತ್ತಿದ್ದಂತೆಯೇ ರಾಷ್ಟ್ರೀಯ ಗಾರ್ಡ್ನ ಮಿಲಿಟರಿ ಪಡೆಗಳು ಶ್ವೇತಭವನದ ಹೊರಗೆ ಪ್ರತಿಭಟನಾಕಾರರು ಪ್ರತಿಭಟಿಸುತ್ತಿರುವಲ್ಲಿಗೆ ತೆರಳಿದರು ಮತ್ತು ಅವರನ್ನು ಚದುರಿಸಲು ಆಶ್ರುವಾಯು ಪ್ರಯೋಗ, ಫ್ಲ್ಯಾಶ್-ಬ್ಯಾಂಗ್ ಗ್ರೆನೇಡ್ ಮತ್ತು ರಬ್ಬರ್ ಗುಂಡುಗಳನ್ನು ಬಳಸಿದರು.
ಸ್ವಲ್ಪ ಸಮಯದ ಬಳಿಕ ಅಧ್ಯಕ್ಷ ಟ್ರಂಪ್ ಅವರು ಶ್ವೇತಭವನದಿಂದ ಹೊರನಡೆದರು ಮತ್ತು ಭಾನುವಾರ ರಾತ್ರಿ ಪ್ರತಿಭಟನಾಕಾರರಿಂದ ಹಾನಿಗೊಳಗಾದ ಉದ್ಯಾನದ ಒಂದು ಬದಿಯಲ್ಲಿರುವ ಚರ್ಚ್ಗೆ ತೆರಳಿದರು. ಅವರೊಂದಿಗೆ ಅವರ ಕ್ಯಾಬಿನೆಟ್ನ ಕೆಲವು ಸದಸ್ಯರಾದ ಮಾರ್ಕ್ ಎಸ್ಪರ್ ಮತ್ತು ವಿಲಿಯಂ ಬಾರ್, ಹೊಸ ಮುಖ್ಯಸ್ಥ ಮಾರ್ಕ್ ಮೆಡೋಸ್ ಮತ್ತು ಸೊಸೆ ಜೇರೆಡ್ ಕುಶ್ನರ್ ಹಾಗೂ ಮಗಳು ಇವಾಂಕಾ ಟ್ರಂಪ್ ಇದ್ದರು.








