ಲಖನೌ : ಕೊರೊನಾ ವೈರಸ್ ಕಾಟಕ್ಕೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಕೊರೊನಾ ಹೆಸರೇಳಿದರೇ ನಿದ್ದೆಯಲ್ಲೂ ಜನರು ಬೆಚ್ಚಿಬೀಳುತ್ತಿದ್ದಾರೆ. ಅದರಲ್ಲೂ ದೂರದೂರುಗಳಿಂದ ಬರುವಂತಹ ಜನ ಕ್ವಾರಂಟೈನ್ ಮಾಡುತ್ತಾರೆಂಬ ಭಯದಿಂದ ಎಸ್ಕೇಪ್ ಆಗುತ್ತಿರುವುದನ್ನು ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೊರೊನಾದಿಂದ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತಪಡಿಸಿ ಶವವನ್ನು ನಡುರೋಡಿನಲ್ಲೇ ಬಿಟ್ಟು ಕುಟುಂಬ ಎಸ್ಕೇಪ್ ಆಗಿರುವುದು ಬೆಳಕಿಗೆ ಬಂದಿದೆ.
ನಾಲ್ಕು ದಿನಗಳಿಂದ ಹಿಂದೆ 35 ವರ್ಷದ ಕಾರ್ಮಿಕರೊಬ್ಬರು ಮುಂಬೈನಿಂದ ಉತ್ತರಪ್ರದೇಶದ ಪ್ರತಾಪ್ ಗರ್ ವಾಪಸ್ಸಾಗಿದ್ದರು. ಹೀಗೆ ಬಂದವರಿಗೆ ಶನಿವಾರ ಅನಾರೋಗ್ಯ ಕಾಡಿದೆ. ಹೀಗಾಗಿ ಪ್ರಗ್ಯರಾಜ್ ನಲ್ಲಿರುವ ಎಸ್ ಆರ್ ಎನ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನೀಡುತ್ತಿರುವಾಗ ಕಾರ್ಮಿಕ ಸಾವನ್ನಪ್ಪುವ ಸಾಧ್ಯೆತಗಳು ಹೆಚ್ಚಾಗಿದ್ದು, ಕೂಡಲೇ ರೋಗಿಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ವೈದ್ಯರು ಕಾರ್ಮಿಕನ ಕುಟುಂಬಕ್ಕೆ ಸೂಚಿಸಿದ್ದಾರೆ. ಹೀಗೆ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆಯೇ ಕಾರ್ಮಿಕ ಮೃತಪಟ್ಟಿದ್ದಾರೆ. ಆದರೆ ಕುಟುಂಬಸ್ಥರು ಕೊರೊನಾದಿಂದಾಗಿಯೇ ಮೃತಪಟ್ಟಿರಬಹುದೆಂದು ಶಂಕಿಸಿ ಮೃತದೇಹವನ್ನು ದಾರಿ ಮಧ್ಯೆಯೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇತ್ತ ದಾರಿಯಲ್ಲಿ ಬಿದ್ದಿರುವ ಶವಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದೆ. ಆ ವೇಳೆ ಪೊಲೀಸರಿಗೆ ಕೋವಿಡ್ 19 ಭಯದಿಂದಲೇ ಶವ ಬಿಸಾಕಿರುವುದು ತಿಳಿದುಬಂತು. ಅಲ್ಲದೆ ಶವದ ವಾರಿಸುದಾರರು ಅದೇ ಗ್ರಾಮದವರು ಎಂದು ಕೂಡ ತಿಳಿಯಿತು. ಹೀಗಾಗಿ ಮೃತನ ಕುಟುಂಬಸ್ಥರು ನೀವೇ ಶವಸಂಸ್ಕಾರ ಮಾಡಿ ಎಂದು ಮನವರಿಕೆ ಮಾಡಿದರು. ಅದರಂತೆ ಮೃತನ ಕುಟುಂಬಸ್ಥರು ಮೃತದೇಹದ ಅಂತ್ಯಸಂಸ್ಕಾರ ಮಾಡಿದ್ದಾರೆ.








