ಮುಂಬೈ, ಜೂನ್ 2 : ಕೊರೊನಾ ದಾಳಿಯಿಂದ ತತ್ತರಿಸಿರುವ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮೇಲೆ ನಿಸರ್ಗ ಹೆಸರಿನ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 15 ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಿದ ಅಂಫನ್ ಚಂಡಮಾರುತ ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ವ್ಯಾಪಕ ಹಾನಿಗೆ ಕಾರಣವಾಗಿತ್ತು. ಬಂಗಾಳಕೊಲ್ಲಿಯಲ್ಲಿ ಎದ್ದ ಅಂಫಾನ್ ಚಂಡಮಾರುತದ ರೌದ್ರಾನರ್ತನದ ಕಹಿನೆನಪು ಮರೆಯಾಗುವ ಮೊದಲೇ ಇದೀಗ ನಿಸರ್ಗ ಹೆಸರಿನ ಸಮುದ್ರ ಸುಂಟರಗಾಳಿ ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿದೆ.
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನಲೆಯಲ್ಲಿ, ಮುಂದಿನ 36 ಗಂಟೆಗಳಲ್ಲಿ ತೀವ್ರ ಚಂಡಮಾರುತದ ಸ್ವರೂಪ ಪಡೆಯಲಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮೇಲೆ ಜೂನ್ 3 ಅಥವಾ 4 ರಂದು ಸಮುದ್ರ ಸುಂಟರಗಾಳಿಯ ಆರ್ಭಟ ಜೋರಾಗಿ ಇರಲಿದ್ದು, ಕರ್ನಾಟಕ ಮತ್ತು ಕೇರಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಈ ಎರಡು ರಾಜ್ಯಗಳ ಮೇಲೆ ಮೀನುಗಾರರು ಅರಬ್ಬಿ ಸಮುದ್ರಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದ್ದು, ನಿಸರ್ಗ ಚಂಡಮಾರುತದ ದಾಳಿ ಎದುರಿಸಲು ಎರಡು ರಾಜ್ಯಗಳು ಈಗಾಗಲೇ ಪೂರ್ವ ಸಿದ್ದತೆಯಲ್ಲಿ ತೊಡಗಿವೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದು ಸಾವಿನ ಸಂಖ್ಯೆಯಲ್ಲಿ ಏರಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಿಸರ್ಗ ಹೆಸರಿನ ಸಮುದ್ರ ಸುಂಟರಗಾಳಿಯು ಸಾಧ್ಯತೆ ಇನ್ನಷ್ಟು ಭಯಭೀತ ವಾತಾವರಣ ಉಂಟುಮಾಡಿದೆ.








