National Herald case: 3ನೇ ಸುತ್ತಿನ ವಿಚಾರಣೆ ED ಮುಂದೆ ಹಾಜರಾದ ಸೋನಿಯಾ ಗಾಂಧಿ…
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೂರನೇ ಸುತ್ತಿನ ವಿಚಾರಣೆಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಜಾರಿ ನಿರ್ದೇಶನಾಲಯದ (ಇಡಿ) ಕಛೇರಿಗೆ ಹಾಜರಾಗಿದ್ದಾರೆ.
ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 11 ಗಂಟೆಗೆ ಕೇಂದ್ರ ದೆಹಲಿಯಲ್ಲಿರುವ ಫೆಡರಲ್ ಏಜೆನ್ಸಿ ಕಚೇರಿಯನ್ನ ತಲುಪಿದರು. 75ರ ಹರೆಯದ ಸೋನಿಯಾ ಗಾಂಧಿ ಅವರನ್ನು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, 65-70 ಪ್ರಶ್ನೆಗಳನ್ನು ಎದುರಿಸಿದ್ದಾರೆ. ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿಗೆ ಇನ್ನೂ 30-40 ಪ್ರಶ್ನೆಗಳನ್ನ ಕೇಳುವ ಸಾಧ್ಯತೆ ಇದೆ. ಬುಧವಾರ ವಿಚಾರಣೆ ಕೊನೆಗೊಳ್ಳುವ ನಿರೀಕ್ಷೆಯಿದೆ.
ಸೋನಿಯಾ ಗಾಂಧಿ ಅವರನ್ನ ಇ ಡಿ ವಿಚಾರಣೆ ನಡೆಸುತ್ತಿರುವುದನ್ನ ಖಂಡಿಸಿ ಕಾಂಗ್ರೆಸ್ ಸಂಸದರು ಕಾರ್ಯಕರ್ತರು ಇಂದು ಸಹ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಕಳೆದ ಎರಡು ಬಾರಿಯಂತೆ ಸಿಆರ್‌ಪಿಎಫ್ ಮತ್ತು ಆರ್‌ಎಎಫ್ ಸಿಬ್ಬಂದಿ ಸೇರಿದಂತೆ ಬೃಹತ್ ಪಡೆಗಳನ್ನು ನಿಯೋಜಿಸಿದ್ದಾರೆ. ಜನಪಥ್-ಅಕ್ಬರ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿಯವರ ನಿವಾಸ ಮತ್ತು ಇಡಿ ಕಚೇರಿ ನಡುವಿನ ಒಂದು ಕಿಲೋಮೀಟರ್ ವ್ಯಾಪ್ತಿಯನ್ನ ಸಂಪೂರ್ಣ ಬ್ಯಾರಿಕೇಡ್ ಮಾಡಲಾಗಿದೆ.
ಇಡಿ ಕಾಂಗ್ರೆಸ್ ಪಕ್ಷಕ್ಕೆ ಕಿರುಕುಳ ನೀಡುತ್ತಿದೆ. ನಮ್ಮ ಕಾಂಗ್ರೆಸ್ ಅಧ್ಯಕ್ಷರ ಆರೋಗ್ಯ ಉತ್ತಮವಾಗಿಲ್ಲ. ಆದರೂ ಅವರನ್ನ ಮತ್ತೆ ಮತ್ತೆ ಕರೆಸಲಾಗುತ್ತಿದೆ. ಇದು ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗಿದೆ. ಆದರೆ ನಾವು ಹೆದರುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.








