ಬೆಂಗಳೂರು : ಒಂದು ಕಡೆ ಕೊರೊನಾ ಸಂಕಷ್ಟ, ಇನ್ನೊಂದೆಡೆ ರೆಬೆಲ್ ಶಾಸಕರ ಕಾಟ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ಚಾಣಾಕ್ಷತನ ಮೆರೆದಿದ್ದಾರೆ.
ಇಂದು ರಾಜ್ಯ ಸರ್ಕಾರ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದೆ. ಬೆಳಗಾವಿ ಜಿಲ್ಲೆ ಮೇಲೆ ಹಾಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮತ್ತು ಸಚಿವೆ ಶಶಿಕಲಾ ಜೊಲ್ಲೆ ಕಣ್ಣಿಟ್ಟಿದ್ದರು. ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಯಾದರೆ ತಮಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕೆಂದು ಉಮೇಶ್ ಕತ್ತಿ ಯಡಿಯೂರಪ್ಪನವರಲ್ಲಿ ಬೇಡಿಕೆ ಇಟ್ಟಿದ್ದರು.
ಈ ಬೆಳವಣಿಗೆಗಳ ನಡುವೆ ಸಿಎಂ ಬಿಎಸ್ ವೈ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡಿ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆದು ರಾಜಕೀಯ ಚಾಣಾಕ್ಷತನ ಮೆರೆದಿದ್ದಾರೆ. ಇನ್ನು ಮುಂದೆ ಬೆಳಗಾವಿ ಜಿಲ್ಲೆಯಿಂದ ಯಾವುದೇ ರೀತಿಯ ಅಪಸ್ವರ ಬರದಂತೆ ಇಡೀ ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ರಮೇಶ್ ಜಾರಕಿಹೊಳಿಗೆ ಜವಾಬ್ದಾರಿ ನೀಡಲಾಗಿದೆ.
ಎಚ್ಚರಿಕೆಯ ಹೆಜ್ಜೆ ಇಟ್ಟ ಸಿಎಂ
ಬಿ.ಎಸ್ ಯಡಿಯೂರಪ್ಪ, ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಲು ಎರಡು ಕಾರಣಗಳಿವೆ. ಲಕ್ಷ್ಮಣ್ ಸವದಿ, ಶಶಿಕಲಾ ಜೊಲ್ಲೆ ಇಲ್ಲವೇ ಉಮೇಶ್ ಕತ್ತಿಗೆ ನೀಡಿದರೆ ಮುಂದೊಂದು ದಿನ ಸರ್ಕಾರಕ್ಕೆ ಬಿಸಿ ತುಪ್ಪವಾಗಬಹುದೆಂಬ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಗೆ ಉಸ್ತುವಾರಿ ನೀಡಿದ್ದಾರೆ ಸಿಎಂ. ಅಲ್ಲದೇ ಜಾರಕಿಹೊಳಿ ಸಹೋದರರನ್ನು ವಿಶ್ವಾಸಕ್ಕಿಟ್ಟುಕೊಂಡರೆ ಬೆಳಗಾವಿ ಬಂಡಾಯವನ್ನು ಹೇಗಾದರೂ ನಿಭಾಯಸಬಹುದೆಂಬ ಕಾರಣಕ್ಕಾಗಿ ಬೆಳಗಾವಿ ಸಾಹುಕಾರ್ ಗೆ ಈ ಹೊಣೆಗಾರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನುಳಿದಂತೆ ಇಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲೆಯ ಹೊಣೆಗಾರಿಕೆ ವಹಿಸಲಾಗಿದೆ. ಕಾನೂನು ಮತ್ತು ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಗೆ ತುಮಕೂರಿನ ಜೊತೆಗೆ ಹೆಚ್ಚುವರಿಗೆ ಹಾಸನ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿತ್ತು.








