ಬೆಂಗಳೂರು : ಮುಂಬೈಯಿಂದ ರೈಲಿ ನಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದವರಲ್ಲಿ ಕೆಲ ಪ್ರಯಾಣಿಕರು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಗೆ ಒಳಗಾಗದೇ ಎಸ್ಕೇಪ್ ಆಗಿದ್ದು, ಅವರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
ಪ್ರಯಾಣಿಕರು ಪರಾರಿಯಾದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈಯಲ್ಲಿ ಬಹಳಷ್ಟು ಕೊರೊನಾ ಸೋಂಕು ಇದೆ. ಆದರೂ ಸರ್ಕಾರ ಅಲ್ಲಿರುವವರಿಗೆ ರೈಲಿನ ವ್ಯವಸ್ಥೆ ಮಾಡಿದೆ. ಕೆಲ ಪ್ಯಾಸೆಂಜರ್ ರೈಲಿನಲ್ಲಿದ್ದ ಪ್ರಯಾಣಿಕರು ಎಸ್ಕೇಪ್ ಆಗಿದ್ದಾರೆ. ಇವರು ಎಲ್ಲಿದ್ದರೂ ಒಂದು ಗಂಟೆಯಲ್ಲಿ ಬಂದು ಪೊಲೀಸರ ಎದುರು ಶರಣಾಗಬೇಕು. ಇಲ್ಲದೇ ಹೋದ್ರೆ ಯಾರೆಲ್ಲಾ ಎಸ್ಕೇಪ್ ಆಗಿದ್ದಾರೆ ಅವರ ಮೇಲೆ ಪೊಲೀಸರೇ ಸ್ವಯಂಪ್ರೇರಿತವಾಗಿ ಎನ್ ಡಿಎಂಎ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ರೈಲಿನಲ್ಲಿ ಬಂದ ಪ್ರತಿಯೊಬ್ಬ ಪ್ರಯಾಣಿಕರ ವಿಳಾಸ ಹುಡುಕುತ್ತೇವೆ. ಅವರೆಲ್ಲರೂ ಕ್ವಾರಂಟೈನ್ ಆಗಬೇಕು. ಸದ್ಯ ಎಸ್ಕೇಪ್ ಆದವರು ಸ್ವಯಂಪ್ರೇರಿತರಾಗಿ ಬಂದರೆ ಒಳ್ಳೇದು, ರೈಲಿನಲ್ಲಿ ಬಂದವರು ಅತೀ ಹೆಚ್ಚಿನ ಕೊರೊನಾ ಸೋಂಕಿನ ಪ್ರದೇಶದವರು. ಅದು ಅವರಿಗೆ ಗೊತ್ತಿರಬೇಕು. ಹಾಗೆ ಬಂದವರಾರೂ ಕಳ್ಳರಲ್ಲ. ನಾವು ಕೂಡ ಯಾರಿಗೂ ಲಾಠಿ ಚಾರ್ಜ್ ಮಾಡಲ್ಲ. ಸುಮ್ಮನೆ ಯಾಕೆ ಹೆದರಬೇಕು, ಕೊರೊನಾ ಸೋಂಕು ಇದೆಯೇ ಅಥವಾ ಇಲ್ವಾ ಅನ್ನೋ ಆರೋಗ್ಯ ತಪಾಸಣೆಗೆ ಕ್ವಾರಂಟೈನ್ ಮಾತ್ರ ಕಡ್ಡಾಯ. ಹೀಗಾಗಿ ಆಟೋ ಬಸ್ ನಲ್ಲಿ ಎಸ್ಕೇಪ್ ಆದವರು ಆದಷ್ಟು ಬೇಗ ವಾಪಸ್ ಬನ್ನಿ ಇಲ್ಲ ಎಂದರೆ ನಾವೇ ಹುಡುಕುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ.








