Asia Cup 2022 : ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ ಯಾವಾಗ ?
ಬಿಸಿಸಿಐ ಏಷ್ಯಾಕಪ್‌ಗೆ ಭಾರತ ತಂಡವನ್ನು ಆಗಸ್ಟ್ 8 ರಂದು ಆಯ್ಕೆ ಮಾಡಲಿದೆ.
ಏಷ್ಯಾ ಕಪ್‌ನಲ್ಲಿ ಭಾಗವಹಿಸುವ ತಂಡಗಳು ತಮ್ಮ ಸಂಪೂರ್ಣ ವಿವರಗಳನ್ನು ಆಗಸ್ಟ್ 8 ರೊಳಗೆ ಘೋಷಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗಡುವು ವಿಧಿಸಿದೆ.
ಈ ಕ್ರಮದಲ್ಲಿ ಅದೇ ದಿನ ಮುಂಬೈನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಯಲಿದೆ.
ತಂಡವನ್ನು ಪ್ರಕಟಿಸುವ ಮುನ್ನಾ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಫಿಟ್ ನೆಸ್ ಮತ್ತು ವಿರಾಟ್ ಕೊಹ್ಲಿ ಫಾರ್ಮ್ ಸೆಲೆಕ್ಟರ್ ಗಳನ್ನು ಚಿಂತೆಗೀಡುಮಾಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಗಾಯಗೊಂಡಿದ್ದ ಕೆ.ಎಲ್.ರಾಹುಲ್ ತಂಡಕ್ಕೆ ದೂರವಾಗಿದ್ದರು.
ಈ ಗಾಯದಿಂದ ಚೇತರಿಸಿಕೊಂಡ ರಾಹುಲ್ ವಿಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು.
ಆದ್ರೆ ಕೊರೊನಾ ಸೋಂಕು ಶನಿಯಂತೆ ಅವರಿಗೆ ವಕ್ಕರಿಸಿತ್ತು.

ಹೀಗಾಗಿ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಂಪೂರ್ಣವಾಗಿ ದೂರವಾದರು.
ಸದ್ಯ ಬೆಂಗಳೂರಿನ ಕ್ರಿಕೆಟ್ ಅಖಾಡಮಿಯಲ್ಲಿರುವ ರಾಹುಲ್ ಗೆ ಇನ್ನೇನು ಕೆಲವೇ ದಿನಗಳಲ್ಲಿ ಫಿಟ್ ನೆಸ್ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷೆಯಲ್ಲಿ ರಾಹುಲ್ ಪಾಸಾದ್ರೆ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲಿದ್ದಾರೆ.
ಇನ್ನು ಫಾರ್ಮ್ ಕಳೆದುಕೊಂಡ ತೀವ್ರ ಸಂಕಷ್ಟದಲ್ಲಿರುವ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ.
ಸದ್ಯ ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಿಯಿಂದಲೂ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.








