ಕೊರೋನಾ ವೈರಸ್‍ನಿಂದಾಗಿ ಕ್ರಿಕೆಟಿಗರು ಮನೆಯಲ್ಲಿದ್ದಾರೆ. ಹಾಗಂತ ಸುಮ್ಮನೆ ಕೂತಿಲ್ಲ. ಹಲವಾರು ಕ್ರಿಕೆಟಿಗರು ಜನರ ನೆರವಿಗೆ ಸ್ಪಂದಿಸಿದ್ದಾರೆ. ಹಾಗೇ ಮನೆಯಲ್ಲೇ ಜಿಮ್ ಮಾಡ್ಕೊಂಡು ಫಿಟ್‍ನೆಸ್ ಕೂಡ ಕಾಯ್ದುಕೊಳ್ಳುತ್ತಿದ್ದಾರೆ.
ಜೊತೆಗೆ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಹಳೆಯ ಪಂದ್ಯಗಳ ಕೆಲವೊಂದು ಸ್ವಾರಸ್ಯಕರವಾದ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಜೂನ್ ಕೊನೆಯ ವಾರದಲ್ಲಿ ಮತ್ತೆ ಮೈದಾನದಲ್ಲಿ ಅಭ್ಯಾಸ ನಡೆಸುವ ಬಗ್ಗೆ ಬಿಸಿಸಿಐ ಚಿಕ್ಕ ಸುಳಿವೊಂದನ್ನು ನೀಡಿದೆ.
ಆಟಗಾರರನ್ನು ಒಂದೇ ಸ್ಥಳದಲ್ಲಿ ಸೇರಿಸಿಕೊಂಡು ಅಭ್ಯಾಸ ಮಾಡಿಸಬಹುದು. ಈಗಾಗಲೇ ಈ ಬಗ್ಗೆ ಎನ್‍ಸಿಎ ಜೊತೆ ಚರ್ಚೆ ಮಾಡಿದ್ದೇವೆ. ಹಾಗೇ ಬೇರೆ ಅವಕಾಶಗಳು ಕೂಡ ನಮ್ಮ ಮುಂದಿವೆ. ಆದ್ರೆ ಕೊರೋನಾ ವೈರಸ್ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ನಿರ್ಧರಿಸುವ ಮಾರ್ಗಸೂಚಿಯನ್ನು ಅನುಸರಿಕೊಂಡು ಹೋಗಬೇಕಾಗಿದೆ. ಹಾಗೇ ಮಳೆಗಾಲದ ಬಗ್ಗೆಯೂ ಗಮನವಿರಿಸಬೇಕಾಗಿದೆ ಎಂದು ಬಿಸಿಸಿಐನ ಉನ್ನತ ಮೂಲಗಳು ಹೇಳಿವೆ.
ಭಾರತದಲ್ಲಿ ಕೊರೋನಾ ವೈರಸ್ ನ ಸೋಂಕು ಸದ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದ್ರೂ ಸುಧಾರಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಅನ್ನು ಹಂತ ಹಂತವಾಗಿ ಸಡಿಲ ಮಾಡುತ್ತಿವೆ.
ಇದೇ ವೇಳೆ ಕ್ರಿಕೆಟ್ ಆಟಗಾರರು ಕಳೆದ ಎರಡು ತಿಂಗಳುಗಳಿಂದ ಕ್ರಿಕೆಟ್‍ನಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಆಟಗಾರರು ಮತ್ತೆ ಮೈದಾನಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ. ಜೂನ್ ಅಂತ್ಯದ ವೇಳೆ ನಾವು ಏನಾದ್ರೂ ಮಾಡಲೇಬೇಕಾದಂತಹ ಯೋಜನೆಯನ್ನು ರೂಪಿಸಬೇಕಾಗಿದೆ ಅಂತ ಬಿಸಿಸಿಐ ಮೂಲಗಳು ತಿಳಿಸಿವೆ.
ಕೊರೋನಾ ಮಹಾಮಾರಿಯಿಂದ ಈಗಾಗಲೇ ವಿಶ್ವದ ಪ್ರತಿಷ್ಠಿತ ಕ್ರೀಡೆಗಳು ಮುಂದೂಲ್ಪಟ್ಟಿವೆ. ಐಪಿಎಲ್ ಮುಂದೂಡಲ್ಪಿಟ್ಟಿದೆ. ಟಿ-ಟ್ವೆಂಟಿ ವಿಶ್ವಕಪ್ ಕೂಡ ಮುಂದೂಲ್ಪಡುವ ಸಾಧ್ಯತೆಗಳಿವೆ. ಮತ್ತೊಂದೆಡೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಕ್ರಿಕೆಟ್ ಆಟಗಾರರಿಗೆ ತರಬೇತಿಯನ್ನು ಯಾವ ರೀತಿ ನೀಡಬೇಕು ಎಂಬುದರ ಬಗ್ಗೆ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ.








