ಸುರೇಶ್ ರೈನಾ ಕಂಡಂತೆ ಧೋನಿಯವರಲ್ಲಿ ಆಗಿರುವ ಬದಲಾವಣೆಯಾದ್ರೂ ಏನು… ?
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಕ್ರಿಕೆಟ್ ಬದುಕು ತೂಗೂಯ್ಯಾಲೆಯಲ್ಲಿದೆ. ಕೊರೋನಾ ವೈರಸ್ನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಂಬರುವ ದಿನಗಳಲ್ಲಿ ಕ್ರಿಕೆಟ್ ಚಟುವಟಿಕೆಗಳು ಶುರುವಾಗುತ್ತವೆ ಎಂದು ಹೇಳಲಾಗುತ್ತಿದೆ. ಆದ್ರೂ ಗ್ಯಾರಂಟಿ ಇಲ್ಲ. ಸದ್ಯದ ಕೊರೋನಾ ಅಟ್ಟಹಾಸದ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ನಡುವೆ, ಟಿ-ಟ್ವೆಂಟಿ ವಿಶ್ವಕಪ್ ಮತ್ತು ಐಪಿಎಲ್ ಭವಿಷ್ಯ ಕೂಡ ನಿರ್ಧಾರವಾಗಿಲ್ಲ. ಹೀಗಾಗಿ ಮುಖ್ಯವಾಗಿ ಧೋನಿಯ ಕ್ರಿಕೆಟ್ ಬದುಕಿನ ಬಗ್ಗೆ ಅನೇಕ ಗಾಸಿಪ್ಗಳು ಹುಟ್ಟಿಕೊಂಡಿವೆ.
ಇದಕ್ಕೆ ಕಾರಣವೂ ಇದೆ. 2019ರ ವಿಶ್ವಕಪ್ ನಂತರ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿಲ್ಲ. ಧೋನಿ ನೆಟ್ ಅಭ್ಯಾಸ ಹೊರತುಪಡಿಸಿ ಇನ್ಯಾವುದೇ ಟೂರ್ನಿಗಳಲ್ಲಿ ಆಡಿಲ್ಲ. ಆದ್ರೂ ಐಪಿಎಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಡುವ ಆಸೆಯನ್ನು ಹೊಂದಿದ್ದರು. ಆದ್ರೆ ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕ ಧೋನಿಯ ಆಸೆ ಈಡೇರುವುದು ಕಷ್ಟ ಕಷ್ಟ..
ಆದ್ರೆ ಧೋನಿಯ ಆಪ್ತ ಸ್ನೇಹಿತ, ಟೀಮ್ ಇಂಡಿಯಾದ ಒಡನಾಡಿ ಸುರೇಶ್ ರೈನಾ ಮಾತ್ರ ಧೋನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಧೋನಿಯವರನ್ನು ತುಂಬಾ ಹತ್ತಿರದಿಂದ ಕಂಡಿರುವ ಸುರೇಶ್ ರೈನಾ ಧೋನಿಯವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.
ಈ ಹಿಂದೆ ನಾವು ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ನೆಟ್ಟ್ ನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದೇವು. ಆಗ ಧೋನಿಯವರನ್ನು ನೋಡಿದಾಗ ತುಂಬಾನೇ ಬದಲಾವಣೆಯಾಗಿದೆ ಅಂತ ಅನ್ನಿಸಿತ್ತು. ಮೊದ ಮೊದಲು ನೆಟ್ಸ್ ನಲ್ಲಿ ಅಭ್ಯಾಸಕ್ಕಿಂತ ಹೆಚ್ಚಾಗಿ ಜಿಮ್ ಅಭ್ಯಾಸದಲ್ಲಿ ನಿರತರಾಗಿದ್ದರು. ಆದ್ರೆ ನೆಟ್ಸ್ ನಲ್ಲಿ ಚೆನ್ನಾಗಿಯೇ ಬ್ಯಾಟ್ ಬೀಸುತ್ತಿದ್ದರು. ಯಾಕಂದ್ರೆ ಅವರ ಫಿಟ್ನೆಸ್ ತುಂಬಾನೇ ಸುಧಾರಣೆಯಾಗಿತ್ತು. ಹೀಗಾಗಿ ಅವರು ಆಯಾಸಪಡುತ್ತಿರಲಿಲ್ಲ ಅಂತಾರೆ ಸುರೇಶ್ ರೈನಾ.
ಧೋನಿಯವರ ಪೂರ್ವ ತಯಾರಿ ಈ ಬಾರಿ ಭಿನ್ನವಾಗಿತ್ತು. ಅವರ ಜೊತೆ ನಾನು ಸುಮಾರು ವರ್ಷದಿಂದ ಭಾರತ ತಂಡದ ಪರ ಹಾಗೂ ಐಪಿಎಲ್ನಲ್ಲಿ ಆಡಿದ್ದೆ. ಆದ್ರೆ ಈ ಬಾರಿ ಅವರಲ್ಲಿ ಬದಲಾವಣೆಯನ್ನು ಕಂಡಿದ್ದೆ. ಕ್ರಿಕೆಟ್ ಪಂದ್ಯಗಳು ಶುರುವಾಗಲಿ. ಆಗ ಪ್ರತಿಯೊಬ್ಬರು ಏನು ಬದಲಾವಣೆಯಾಗಿದೆ ಅಂತ ತಿಳಿದುಕೊಳ್ಳಬಹುದು. ನಾನು ಏನು ನೋಡಿದ್ದೇನೆ ಎಂಬುದು ಕೂಡ ಅರ್ಥವಾಗುತ್ತೆ ಅಂತ ಸುರೇಶ್ ರೈನಾ ತನ್ನ ಗೆಳೆಯ ಧೋನಿಯ ಫಿಟ್ನೆಸ್ ಮತ್ತು ಸಾಮಥ್ರ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಾನು, ಮಹೀ ಭಾಯ್, ಮುರಳಿ ವಿಜಯ್ ಮತ್ತು ಅಂಬಟಿ ರಾಯುಡು ಜೊತೆಯಾಗಿ ಬ್ಯಾಟಿಂಗ್ ತಾಲೀಮು ನಡೆಸುತ್ತಿದ್ದೇವು. ಮಹೀ ಭಾಯ್ ಸುಮಾರು 2ರಿಂದ ನಾಲ್ಕು ಗಂಟೆಗಳ ತನಕ ಅಭ್ಯಾಸ ನಡೆಸುತ್ತಿದ್ದರು. ಆದ್ರೆ ಈ ಬಾರಿ ನಾನು ಅವರ ಮುಖದಲ್ಲಿ ಆಯಾಸ ಎಂಬುದನ್ನು ನೋಡಿಲ್ಲ. ಬೆಳಗ್ಗಿನ ಸಮಯ ಜಿಮ್ ಕಸರತ್ತಿನಲ್ಲಿ ಭಾಗಿಯಾಗುವ ಧೋನಿ ಸಂಜೆ ಸುಮಾರು ಮೂರು ಗಂಟೆಗಳ ಕಾಲ ಬ್ಯಾಟಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದರು ಎಂದು ಸುರೇಶ್ ರೈನಾ ಹೇಳಿದ್ರು.








