ಡ್ರೆಸಿಂಗ್ ರೂಮ್ ನಲ್ಲಿ ಯಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ವೇಗಿ ಮಹಮ್ಮದ್ ಶಮಿ…!
ಮಹಮ್ಮದ್ ಶಮಿ… ವೈಯಕ್ತಿನ ಬದುಕಿನಲ್ಲಿ ಖುಷಿಗಿಂತ ಹೆಚ್ಚಾಗಿ ನೋವನ್ನೇ ಅನುಭವಿಸಿದ್ದ ನತದೃಷ್ಟ ವ್ಯಕ್ತಿ. ಆದ್ರೆ ಟೀಮ್ ಇಂಡಿಯಾದ ವೇಗಿಯಾಗಿ ಅದ್ಭುತ ಯಶಸ್ಸನ್ನು ಕಂಡಿರುವ ಅದೃಷ್ಟವಂತ ಕ್ರಿಕೆಟಿಗ. ಮೂರು ಮಾದರಿಯ ಕ್ರಿಕೆಟ್ ನಲ್ಲೂ ಮಹಮ್ಮದ್ ಶಮಿ ಟೀಮ್ ಇಂಡಿಯಾ ಪಾಲಿನ ಅಪತ್ಬಾಂಧವ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್ ನ ಎರಡನೇ ಇನಿಂಗ್ಸ್ ನಲ್ಲಿ ವಿಕೆಟ್ ಕಬಳಿಸುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ.
ಸದ್ಯ ಮಹಮ್ಮದ್ ಶಮಿಗೆ ಕಾಟ ಕೊಡುತ್ತಿರುವವರು ಅಂದ್ರೆ ಅವರ ಪತ್ನಿ. ಹೊಂದಾಣಿಕೆಯ ಕೊರತೆಯೋ ಇನ್ನೇನೋ ಕಾರಣವೋ ಗೊತ್ತಿಲ್ಲ. ಪತ್ನಿಯ ಕಿರುಕುಳದಿಂದ ಆತ್ಮಹತ್ಯೆಗೂ ಮುಂದಾಗಿದ್ದ ಶಮಿ, ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಖುಷಿಯನ್ನೇ ಮರೆತಿದ್ದಾರೆ. ಆದ್ರೆ ಪ್ರತಿಭೆ ಒಂದು ಇದೆಯಲ್ವಾ.. ಅದೇ ಮಹಮ್ಮದ್ ಶಮಿ ಬದುಕಿಗೆ ಮಿಂಚಾಗಿ ಪರಿಣಮಿಸಿದೆ. ಈಗಲೂ ಪತ್ನಿ ಶಮಿಯವರನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪಮಾನ ಮಾಡುತ್ತಲೇ ಇದ್ದಾರೆ. ಆದ್ರೂ ಮಹಮ್ಮದ್ ಶಮಿ ಮೈದಾನದಲ್ಲಿ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಅದಿರಲಿ, ಮಹಮ್ಮದ್ ಶಮಿ ಟೀಮ್ ಇಂಡಿಯಾದಲ್ಲಿ ಯಾರನ್ನೋ ಒಬ್ಬರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.
ಅವರು ತಂಡದಲ್ಲಿದ್ದಾಗ ಅವರ ಜೊತೆ ಊಟ ಮಾಡುತ್ತಿದ್ದೇವೆ. ತುಂಬಾ ಹೊತ್ತು ಕೂತು ಮಾತನಾಡುತ್ತಿದ್ದೇವು. ಆ ಆಟಗಾರನ ವ್ಯಕ್ತಿತ್ವ, ಹಾಸ್ಯ ಪ್ರಜ್ಞೆ ಈಗ ಡ್ರೆಸಿಂಗ್ ರೂಮ್ ನಲ್ಲಿ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ರೆ ಆ ವ್ಯಕ್ತಿ ಯಾರು… ?
ಈ ಪ್ರಶ್ನೆಗೆ ಉತ್ತರ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಐಪಿಎಲ್ ಹೊರತುಪಡಿಸಿ ನಾನು ಮೂರು ಮಾದರಿಯ ಕ್ರಿಕೆಟ್ ನಲ್ಲೂ ಅವರ ನಾಯಕತ್ವದಲ್ಲಿ ಆಡಿದ್ದೇನೆ. ತಂಡದ ಆಟಗಾರರ ಜೊತೆಗಿನ ಅವರ ಒಡನಾಟವನ್ನು ನೋಡಿದಾಗ ಇವರೇನಾ ಮಹೇಂದ್ರ ಸಿಂಗ್ ಅಂತನೂ ಅನ್ನಿಸುತ್ತಿತ್ತು ಮಹೇಂದ್ರ ಸಿಂಗ್ ಶ್ರೇಷ್ಠ ಆಟಗಾರ. ಅವರೊಂದಿಗಿನ ಒಡನಾಟದ ಸಾಕಷ್ಟು ನೆನಪುಗಳು ನನ್ನಲ್ಲಿವೆ. ಈಗಲೂ ಧೋನಿ ತಂಡದಲ್ಲಿದ್ರೆ ಚೆಂದ ಅಂತ ಮಹಮ್ಮದ್ ಶಮಿ ಹೇಳ್ತಾರೆ.
ನಾನು ಧೋನಿಯವರ ಒಂದು ಗುಣವನ್ನು ತುಂಬಾ ಮೆಚ್ಚಿಕೊಂಡಿದ್ದೇನೆ. ಅವರು ಎಲ್ಲರ ಜೊತೆ ಬೆರೆಯುತ್ತಿದ್ದರು. ಎಲ್ಲರ ಜೊತೆ ಸೇರಿಕೊಂಡು ಊಟ ಮಾಡುತ್ತಿದ್ದರು. ಊಟ ಮಾಡುತ್ತಿರುವಾಗ ಅವರ ಜೊತೆ ಕನಿಷ್ಠ 2ರಿಂದ ನಾಲ್ಕು ಮಂದಿ ಇರುತ್ತಿದ್ದರು. ಕೆಲವೊಂದು ಬಾರಿ ನಾವು ತಡರಾತ್ರಿಯವರೆಗೆ ಚರ್ಚೆ ಮಾಡುತ್ತಿದ್ದೇವು. ಇದೆಲ್ಲವನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳ್ತಾರೆ ಮಹಮ್ಮದ್ ಶಮಿ.
ಆದ್ರೆ ಧೋನಿ ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದು ಅಷ್ಟೊಂದು ಸುಲಭವಿಲ್ಲ. ಕೊರೋನಾ ವೈರಸ್ ಧೋನಿ ಕ್ರಿಕೆಟ್ ಬದುಕಿಗೂ ಕಂಟಕವಾಗಿ ಪರಿಣಮಿಸಿದೆ. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯ ನಿರ್ಧಾರವಾಗಿಲ್ಲ. ಐಪಿಎಲ್ ಕೂಡ ನಡೆಯುವುದು ಡೌಟ್. ಹೀಗಾಗಿ ಧೋನಿ ಸುದ್ದಿಗೋಷ್ಠಿಯಲ್ಲೇ ತನ್ನ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರೂ ಅಚ್ಚರಿ ಇಲ್ಲ. ಆದ್ರೂ ಧೋನಿಯ ಬಗ್ಗೆ ಏನನ್ನು ಹೇಳುವ ಹಾಗಿಲ್ಲ. ಯಾಕಂದ್ರೆ ಧೋನಿ ಬದುಕಿನಲ್ಲಿ ತಾನು ಅಂದುಕೊಂಡಂತೆ ಜೀವನ ಸಾಗಿಸಿದವರು ಎಂಬುದನ್ನು ಮರೆಯುವ ಹಾಗಿಲ್ಲ.








