ಕಲಬುರಗಿ : ಕಲಬುರಗಿ ಜಿಲ್ಲಾಡಳಿತ ಕೊರೊನಾ ನಿಯಂತ್ರಿಸುವ ವಿಚಾರದಲ್ಲಿ ಬಹುದೊಡ್ಡ ಎಡವಟ್ಟು ಮಾಡಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.
14 ದಿನ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದವರ ವರದಿ ಬರುವ ಮುನ್ನವೆ ಮನೆಗೆ ಕಳುಹಿಸಲಾಗುತ್ತಿದೆ. ಜೊತೆಗೆ ಗಂಟಲು ದ್ರವ ತಪಾಸಣೆಗೆ ಕಳುಹಿಸಿ ವರದಿ ಬರುವ ಮುನ್ನವೇ ಅವರನ್ನು ಮನೆಗೆ ಕಳುಹಿಸಿಕೊಡುತ್ತಿದೆ. ಹೀಗೆ ಮನೆಗೆ ಕಳುಹಿಸಿದವರಲ್ಲಿ ಹೆಚ್ಚಾಗಿ ಕೊರೊನಾ ಪಾಸಿಟಿವ್ ಬರುತ್ತಿದೆ.
ಇನ್ನೂ ಮನೆಗೆ ನೂರಾರು ಜನರು ಹೋಗಿದ್ದಾರೆ. ಅವರಲ್ಲಿ ಹೆಚ್ಚು ಕೊರೊನ ಸೋಂಕು ದೃಢವಾಗುತ್ತಿದೆ. ಹಾಗಾಗಿ ಅವರನ್ನು ಮತ್ತೆ ಆಸ್ಪತ್ರೆಗೆ ಕರೆತರಲು ಮತ್ತು ಅವರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಜಿಲ್ಲಾಡಳಿತ ಹರಸಾಹಾಸ ಪಡುತ್ತಿದೆ. ಮನೆಗೆ ಹೋದ ಸೋಂಕಿತರಿಂದ ಅವರ ಕುಟುಂಬದವರಿಗೆ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ನಿನ್ನೆ ಜಿಲ್ಲೆಯಲ್ಲಿ ಬಂದ ನೂರು ಪಾಸಿಟಿವ್ ಪ್ರಕರಣಗಳಲ್ಲಿ ಶೇ 80 ರಷ್ಟು ಜನ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದವರೇ ಆಗಿದ್ದಾರೆ. ಆದರೆ ಅವರನ್ನು ವರದಿ ಬರುವ ಮುನ್ನ ಮನೆಗೆ ಕಳಿಸಲಾಗಿತ್ತು. ಸರ್ಕಾರದ ಎಡವಟ್ಟಿನಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ.








