ಅಂಬಿಗರ ಸಮಾಜ ಪರ್ಯಾಯ ಪದವಲ್ಲ ಎಂದು ಕರ್ನಾಟಕ ರಾಜ್ಯ ನಾಯಕರ ಯುವಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು ಸ್ಪಷ್ಟ ಪಡಿಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಕಾರಜೋಳ ಅವರು ಬಿಜಾಪುರದಲ್ಲಿ ಎಸ್ಟಿ ಸೇರ್ಪಡೆಯಾದ ತಳವಾರ ಸಮುದಾಯ ಶೇ.90ರಷ್ಟು ಅಂಬಿಗರಿಗೆ ಅನುಕೂಲವಾಗಿರುತ್ತದೆ. ಇನ್ನು ಮುಂದೆ ಅಂಬಿಗರೆಲ್ಲಾ ತಳವಾರ ಎಂದು ಬರೆಸಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆಯಿರಿ ಎಂದು ಕಾನೂನಿಗೆ ವಿರುದ್ಧವಾಗಿ ಹೇಳಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಗೋವಿಂದ ಕಾರಜೋಳ ಅವರು ಪರಿವಾರ ಮತ್ತು ತಳವಾರದಲ್ಲಿ ಆಡಿರುವ ಗೊಂದಲದ ಮಾತು ನೋಡಿದರೆ ಇದರ ಬಗ್ಗೆ ಜ್ಞಾನದ ಕೊರತೆಯೋ ಅಥವಾ ರಾಜಕೀಯ ದುರುದ್ದೇಶವೋ ಎಂಬ ಅನುಮಾನ ಉಂಟಾಗಿದೆ. ತಮಗೆ ಮಾಹಿತಿ ಕೊರತೆ ಇದ್ದರೆ ತಾವು ತಮ್ಮ ಸರ್ಕಾರದಿಂದ ಗಿರಿಜನ ಸಂಶೋಧನಾ ಸಂಸ್ಥೆಯ ವತಿಯಿಂದ ನಾಯಕ ಸಮಾಜದ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ಎಸ್ಟಿ ಸೇರಿಸಲು ಕುಲಶಾಸ್ತ್ರ ಅಧ್ಯಯನ ಮಾಡಿರುವ ವರದಿಯನ್ನು ಮತ್ತು ಕೇಂದ್ರ ಸರ್ಕಾರ ಪರಿವಾರ ಮತ್ತು ತಳವಾರಗಳು ಯಾವ ಉದ್ದೇಶಕ್ಕೆ ಎಸ್ಟಿಗೆ ಸೇರಿದೆ ಎನ್ನುವ ಗೆಜೆಟ್ ನೋಟಿಫಿಕೇಶನ್ ನ್ನು ಒಮ್ಮೆ ಓದಿ ಆಮೇಲೆ ತಿಳಿಯುತ್ತದೆ. ಪರಿವಾರ ಮತ್ತು ತಳವಾರ ನಾಯಕ ಸಮಾಜದ ಪರ್ಯಾಯ ಪದವೇ ವಿನಃ ಅಂಬಿಗರ ಸಮಾಜದ ಪರ್ಯಾಯ ಪದವಲ್ಲ ಎಂದು ಸ್ಪಷ್ಟಪಡಿಸಿದರು.
36ವರ್ಷಗಳಿಂದ ವಾಲ್ಮೀಕಿ ಸಮಾಜದ ಗುರುಪೀಠದ ಗುರುಗಳು, ರಾಜಕಾರಣಿಗಳು, ಸಂಘಸಂಸ್ಥೆಗಳು ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಇಂದು ಕೇಂದ್ರ ಸರ್ಕಾರ ನಾಯಕ ಸಮಾಜದ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರಗಳನ್ನು ಎಸ್ಟಿಪಟ್ಟಿಯ ಕ್ರಮ ಸಂಖ್ಯೆ 38ರಲ್ಲಿ ಇರುವ ನಾಯಕ, ನಾಯ್ಕ್,ಬೇಡ, ವಾಲ್ಮೀಕಿ ಇರುವ ಪಟ್ಟಿಗೆ ಗೆಜೆಟ್ ನೋಟಿಫಿಕೇಶನ್ ಮಾಡಿ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಇದನ್ನು ದಯವಿಟ್ಟು ಓದಿ.
ತಮ್ಮ ಹೇಳಿಕೆಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ತಾವೇ ಕುಮ್ಮಕ್ಕು ಕೊಟ್ಟಂತೆ ಆಗಿರುತ್ತದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆದ ಪರಿಸ್ಥಿತಿಯೇ ತಮಗೂ ಬರಬಹುದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಯಚೂರಲ್ಲಿ ನಡೆದ ಹಾಲುಮತ ಸಮಾವೇಶದ ಭಾಷಣದಲ್ಲಿ ಕುರುಬರು, ಹಾಲು ಮತದವರು ಶಾಲಾ ದಾಖಲಾತಿಗಳಲ್ಲಿ ಇನ್ನು ಮುಂದೆ ಗೊಂಡ-ರಾಜಗೊಂಡ ಎಂದು ಬರೆಸಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆಯಿರಿ ಎಂದು ಬಹಿರಂಗವಾಗಿ ಕರೆ ನೀಡಿದ್ದರು.
ಇದು ಇಡೀ ಎಸ್ಟಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.ಇದರಿಂದ ಅವರು ಸ್ವತಃ ಚುನಾವಣೆಯಲ್ಲಿ ಸೋತು ರಾಜ್ಯದಲ್ಲೂ ಸಹ ಅಧಿಕಾರ ಕಳೆದುಕೊಳ್ಳಬೇಕಾಯಿತು.ಆದ್ದರಿಂದ ಇಂತಹ ಪರಿಸ್ಥಿತಿ ನಿಮಗೆ ಬರುವುದು ಬೇಡ. ಜಾತಿ ಎನ್ನುವುದು ಹುಟ್ಟಿನಿಂದ ಬರುವಂಥದ್ದು. ಬರೆಸಿಕೊಂಡರೆ ಬರುವಂಥದ್ದಲ್ಲ.
ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್ ನೋಟೀಫೀಕೇಶನ್ ನೋಡಿ ನಾಯಕ ಸಮಾಜ ಪರಿವಾರ ಮತ್ತು ತಳವಾರ ಸಮುದಾಯದವರು ಯಾವ ಜಿಲ್ಲೆಗಳಲ್ಲಿ ಇದ್ದಾರೆ ಅದನ್ನು ವರದಿಯಲ್ಲಿ ಪರಿಶೀಲಿಸಿ ಅಲ್ಲಿ ಅವರ ಜಾತಿ ಪತ್ರವನ್ನು ನೀಡಲು ಸೂಚಿಸಬೇಕೇ ವಿನಃ ಇತರ ಜಾತಿಯಲ್ಲಿ ಇರುವ ತಳವಾರ ಸಮಾಜದವರಿಗೆ ಎಸ್ಟಿ ಪ್ರಮಾಣ ಪತ್ರವನ್ನು ನೀಡುವುದನ್ನು ತಡೆದು ನಿಜವಾದ ನಾಯಕ, ಪರಿವಾರ, ತಳವಾರದವರಿಗೆ ಅನ್ಯಾಯವಾಗದಂತೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಜಿಲ್ಲಾಧ್ಯಕ್ಷ ಚನ್ನನಾಯಕ ಉಪಸ್ಥಿತರಿದ್ದರು.








