ಹರ್ ಘರ್ ಜಲ್ ಯೋಜನೆಯ ಮೊದಲ ಪ್ರಮಾಣೀಕೃತ ರಾಜ್ಯ ಗೋವಾ – ಪ್ರಧಾನಿ ಅಭಿನಂದನೆ..
ಗೋವಾ ರಾಜ್ಯ ಹರ್ ಘರ್ ಜಲ್ ಯೋಜನೆಯ ಮೊದಲ ಪ್ರಮಾಣೀಕೃತ ರಾಜ್ಯವಾಗಿ ಹೊಮ್ಮಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪಾಲ್ಗೊಂಡರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ, ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳು ಹರ್ ಘರ್ ಜಲ್ ಯೋಜನೆಗೆ ಸೇರ್ಪಡೆಗೊಂಡಿವೆ. ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವ ಈ ಯೋಜನೆಯಿಂದ ದೇಶದ ಮಹಿಳೆಯರು ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದರು.
ಗೋವಾ ರಾಜ್ಯ ಪ್ರತಿ ಮನೆಗೆ ಕೊಳಾಯಿ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಈ ಯೋಜನೆಯ ಮೊದಲ ಪ್ರಮಾಣೀಕೃತ ರಾಜ್ಯವಾಗಿದೆ. ನಗರ್ ಹವೇಲಿ , ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳು ಸಹ ಪೂರ್ಣ ಪ್ರಮಾಣದಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡಿವೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಇನ್ನೂ ಹಲವಾರು ರಾಜ್ಯಗಳು ಈ ಸಾಲಿಗೆ ಸೇರ್ಪಡೆಗೊಳ್ಳಲಿವೆ ಎಂದು ತಿಳಿಸಿದರು.







