Ganeshotsava | ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಹಿ ಸಂಗ್ರಹ
ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಪ್ರಸ್ತುತ ವರ್ಷ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ಹಿಂದುಪರ ಸಂಘಟನೆಗಳು ಸೋಮವಾರ ನಗರದ ದುರ್ಗದ ಬೈಲ್ ನಿಂದ ಪಾಲಿಕೆ ಕಚೇರಿವರೆಗೂ ಸಹಿ ಸಂಗ್ರಹ ಜಾಗೃತಿ ಜಾಥಾ ನಡೆಸಲು ತೀರ್ಮಾನ ಮಾಡಿವೆ.
ಮುರುಸಾವಿರಮಠದಲ್ಲಿ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮೂರು ದಿನಗಳ ಗಡುವು ಮುಕ್ತಾಯವಾದ ಹಿನ್ನೆಲೆ ವಿವಿಧ ಹಿಂದೂಪರ ಸಂಘಟನೆಗಳು ಅಭಿಪ್ರಾಯ ಸಂಗ್ರಹಿಸಲು ಮುಂದಾಗಿವೆ.

ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ಮನವಿ ಪ್ರತಿಯನ್ನು ಮುಖ್ಯಮಂತ್ರಿ, ರಾಜ್ಯದ ಸಿಎಸ್ ಗೂ ಈಗಾಗಲೇ ರವಾನೆ ಮಾಡಲಾಗಿದೆ. ಆದ್ರೆ ಸಮರ್ಪಕ ಉತ್ತರ ಬಂದಿಲ್ಲ. ನಾವು ಹೆಸ್ಜಾಂ, ಪರಿಸರ ಮಾಲಿನ್ಯ ಇಲಾಖೆಯಿಂದ ಯಾಕೆ ಪರವಾನಗಿ ಪಡೆಯಬೇಕು ಎಂದು ಹಿಂದುಪರ ಸಂಘಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಈದ್ಗಾ ಮೈದಾನಕ್ಕೆ ಮುಸ್ಲಿಮರಿಗೆ ಇರುವಷ್ಟೇ ಅಧಿಕಾರ ಹಿಂದೂಗಳಿಗೂ ಇದೆ. ಕೆಲವರು ಈ ಮೈದಾನವನ್ನು ರಾಜಕೀಯ ಹೋರಾಟಕ್ಕೆ ಬಳಕೆ ಮಾಡಿಕೊಂಡರು. ಈಗ ನಮ್ಮ ಮನೆಯಲ್ಲಿ ನಾವೇ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಗಣೇಶಮೂರ್ತಿ ಪ್ರತಿಷ್ಠಾಪಿಸುವವರೆಗೂ ನಾವು ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ ಎಂದು ಹೇಳಿದ್ದಾರೆ.








