ಮುಂಬೈ, ಜೂನ್ 3 : ಬುಧವಾರ ಮಧ್ಯಾಹ್ನದ ವೇಳೆಗೆ ಮಹಾರಾಷ್ಟ್ರದ ಕರಾವಳಿ ಅಲಿಬಾಗ್ (ರಾಯ್ಗಢ) ಪ್ರದೇಶಕ್ಕೆ ಬಂದು ಅಪ್ಪಳಿಸಿದ ನಿಸರ್ಗ ಚಂಡಮಾರುತ ಮುಂಬೈ ನಗರವನ್ನು ನಡುಗಿಸಿದೆ. ಇದರಿಂದಾಗಿ ಮುಂಬೈ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಜೋರಾಗಿ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮುಂಬೈ ವಿಮಾನ ನಿಲ್ದಾಣದಿಂದ ಸಂಜೆಯ ತನಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಬುಧವಾರ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ 43 ತಂಡಗಳನ್ನು ನಿಯೋಜಿಸಿದೆ. ನಿಸರ್ಗಾ ಚಂಡಮಾರುತದಿಂದ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಭೂಕುಸಿತ ಪ್ರಾರಂಭಿಸಿದ್ದರಿಂದ ಕರಾವಳಿಗೆ ಹತ್ತಿರದಲ್ಲಿ ವಾಸಿಸುತ್ತಿದ್ದ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಿದೆ. ಇನ್ನೂ 5 ತಂಡಗಳನ್ನು ವಿಶಾಖಪಟ್ಟಣದಿಂದ ಏರ್ ಲಿಫ್ಟ್ ಮಾಡಲಾಗಿದೆ
ಮುಂಬೈಯ ವರ್ಸೋವಾ ಕಡಲ ಕಿನಾರೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಭಾರಿ ಗಾಳಿ ಬೀಸುತ್ತಿದ್ದ ಹಿನ್ನಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಬೃಹನ್ಮುಂಬೈ ನಗರ ಪಾಲಿಕೆ ಜಂಟಿಯಾಗಿ ವರ್ಸೋವಾ ಕಡಲ ತೀರ ಪ್ರದೇಶದಲ್ಲಿರುವ ಜನರನ್ನು ಬೆಳಿಗ್ಗೆಯೇ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದರು. ಮುಂಬೈ ನಗರದಾದ್ಯಂತ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮನೆಯಿಂದ ಹೊರ ಬರದಂತೆ ಆದೇಶ ಹೊರಡಿಸಲಾಗಿದೆ.
ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಹಾಗೂ ಭಾರತೀಯ ನೌಕಾಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಕರಾವಳಿಗೆ ಚಂಡಮಾರುತ ಅಪ್ಪಳಿಸಿದ್ದು, ಚಂಡಮಾರುತ ಪ್ರಭಾವದಿಂದ ಗಂಟೆಗೆ ಸುಮಾರು 120 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ








