ಬೆಂಗಳೂರು ; ನಗರದ ಹೃದಯ ಭಾಗವಾದ ಆನಂದ ರಾವ್ ವೃತ್ತದ ಬೆಸ್ಕಾಂ ಟ್ರಾನ್ಸ್ ಫಾರ್ಮರ್ ಗೆ ಇಂದು ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದಾಗ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಘಟನೆಗೆ ಸ್ಪಷ್ಟ ಕಾರಣ ಏನು ಎಂಬುದು ನಿಖರವಾಗಿ ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕೂಟ್‌ನಿಂದ 20 ಕೆಬಿ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಬೃಹತ್ ಟ್ರಾನ್ಸ್ ಫಾರ್ಮರ್ ಅಗ್ನಿಗಾಹುತಿ ಆಗಿದ್ದರಿಂದ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸ ಆಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ವಿಧಾನಸೌಧ, ರಾಜಭವನ, ಅವೆನ್ಯೂ ರಸ್ತೆ, ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಕಾಟನ್‌ಪೇಟೆ, ಶೇಷಾದ್ರಿಪುರ, ಮಲ್ಲೇಶ್ವರ, ವಸಂತ ನಗರದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸ ಆಗಲಿದೆ.








