ಕ್ರಿಕೆಟ್ ವಿಶ್ವಕಪ್ ಹೀರೋಗಳ ಪಾತ್ರಕ್ಕೆ ಜೀವ ತುಂಬಿದ “ಅವರ ಮಕ್ಕಳು”… ಇದು “83” ಸಿನಿಮಾದ ಸ್ಪೇಷಲ್…!
1983ರ ವಿಶ್ವಕಪ್ ಗೆಲುವು…. ಅದು ನೆನಪು ಇರಲೇಬೇಕು. ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ 1983 ಅಂದಾಗ ತಕ್ಷಣ ನೆನಪಾಗೋದು ಕಪಿಲ್ ಡೇವಿಲ್ಸ್. ಕ್ರಿಕೆಟ್ ಕಾಶಿ ಲಾಡ್ರ್ಸ್ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಓಡುತ್ತಿರುವುದು.. ಮೈದಾನದಲ್ಲಿ ಅಭಿಮಾನಿಗಳು ಸಂಭ್ರಮಿಸಿರೋದು… ಹೀಗೆ ಆ ಗೆಲುವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನ ಪುಟದಲ್ಲಿರುತ್ತದೆ.
ಇಂಗ್ಲೆಂಡ್‍ನಲ್ಲಿ 1983ರಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ಹೋಗಿದ್ದು ಒಂದು ಜಾಲಿ
ಟ್ರಿಪ್‍ಗೆ ಅಷ್ಟೇ. ಯಾಕಂದ್ರೆ ಭಾರತ ವಿಶ್ವಕಪ್ ಗೆಲ್ಲುವುದು ಕನಸಿನ ಮಾತಾಗಿತ್ತು. ಗೆಲ್ಲುತ್ತೆ ಅನ್ನೋದನ್ನು ಯಾರು ಕೂಡ ಕಲ್ಪನೆ ಕೂಡ ಮಾಡಿರಲಿಲ್ಲ. ಆದ್ರೆ ನಾಯಕ ಕಪಿಲ್ ದೇವ್ ಮಾತ್ರ ಗೆಲ್ಲಲೇಬೇಕು ಅನ್ನೋ ಹಠಕ್ಕೆ ಬಿದ್ದಿದ್ದರು. ತಂಡವನ್ನು ಹೇಗೆ ಹುರಿದುಂಬಿಸಬೇಕು ಎಂಬುದನ್ನು ಜಿಂಬಾಬ್ವೆ ವಿರುದ್ಧ ತಾನೇ ಅಜೇಯ 175 ರನ್ ಸಿಡಿಸಿ ತೋರಿಸಿದ್ದರು. ಅಲ್ಲಿಂದ ಶುರುವಾಯ್ತು ನೋಡಿ.. ಭಾರತ ತಂಡದ ಗೆಲುವಿನ ಯಾತ್ರೆ… ಫೈನಲ್ ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಲಾಡ್ಸ್ ್ ಬಾಲ್ಕನಿಯಲ್ಲಿ ಕಪಿಲ್ ದೇವ್ ಬಳಗ ವಿಶ್ವಕಪ್ ಟ್ರೋಫಿಗೆ ಚುಂಬಿಸಿದ್ದ ರೀತಿ -ಪರಿ ಎಲ್ಲವೂ ಈಗ ಇತಿಹಾಸ
ಇಂತಹ ಐತಿಹಾಸಿಕ ಪಂದ್ಯ, ಐತಿಹಾಸಿಕ ತಂಡ, ಐತಿಹಾಸಿಕ ಗೆಲುವಿನ ಕುರಿತಂತೆ ಒಂದು ಚಲನಚಿತ್ರ ಬರುತ್ತಿದೆ. ಈಗಾಗಲೇ ಭಾರತದಲ್ಲಿ ಕ್ರಿಕೆಟ್, ಕ್ರಿಕೆಟ್ ಆಟಗಾರರು ಹಾಗೂ ಕ್ರೀಡಾ ಸಾಧಕರ ಕಥೆಗಳನ್ನು ಆಧರಿಸಿಕೊಂಡು ಸಾಕಷ್ಟು ಚಲನಚಿತ್ರಗಳು ಮೂಡಿಬಂದಿವೆ. ಆದ್ರೆ ಇದು ಎಲ್ಲಾ ಚಲನಚಿತ್ರಗಳಿಂದ ಭಿನ್ನವಾಗಿದೆ. 83 ಎಂಬ ಟೈಟಲ್ ನಲ್ಲಿ ಖ್ಯಾತ ನಿರ್ದೇಶಕ ಕಬೀರ್ ಖಾನ್ ಅವರು ಈ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಮಿಂಚು ಹರಿಸಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಬಿಡುಗಡೆಗಾಗಿ ಚಿತ್ರ ತಂಡ ಕಾಯುತ್ತಿದೆ. ಒಂದು ಮೂಲಗಳ ಪ್ರಕಾರ ಕೊರೋನಾ ವೈರಸ್ ಸೋಂಕಿನ ನಡುವೆಯೂ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರ ತಂಡ ರೆಡಿಯಾಗಿದೆಯಂತೆ.
ಇನ್ನು 83 ಸಿನಿಮಾ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ರಣವೀರ್ ಸಿಂಗ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಬಹುತೇಕ ಆಟಗಾರರ ಪಾತ್ರವನ್ನು ಅವರ ಮಕ್ಕಳೇ ನಿಭಾಯಿಸಿದ್ದಾರೆ. ಇದು ಈ ಚಿತ್ರದ ಹೈಲೈಟ್ಸ್. ಭಾರತ ಹಾಗೂ ವೆಸ್ಟ್ ಇಂಡೀಸ್ ಫೈನಲ್ ಪಂದ್ಯ ಈ ಚಿತ್ರದ ಹೈಲೈಟ್ಸ್. ಹಾಗಾಗಿ ವೆಸ್ಟ್ ಇಂಡೀಸ್ ತಂಡದ ಆಟಗಾರರ ಪಾತ್ರವನ್ನು ಸಹ ಅವರ ಮಕ್ಕಳು ಮಾಡಿದ್ದಾರೆ. ಜೊತೆಗೆ ಕೆಲವು ಕ್ರಿಕೆಟ್ ಆಟಗಾರರೇ ಮಾಡಿದ್ದಾರೆ.
ಅಂದ ಹಾಗೇ ನೀವು ಮರಾಠಿ ಚಲನಚಿತ್ರಗಳಲ್ಲಿ ಚಿರಾಗ್ ಪಾಟೀಲ್ ಹೆಸರನ್ನು ಕೇಳಿರಬಹುದು. ಅವರ ಪಾತ್ರವನ್ನು ನೋಡಿರಬಹುದು. ಅದೇ ಚಿರಾಗ್ ಪಾಟೀಲ್ ಅವರು ಭಾರತ ತಂಡದ ಆಟಗಾರ ಸಂದೀಪ್ ಪಾಟೀಲ್ ಪಾತ್ರದಲ್ಲಿ ನಟಿಸಿದ್ದಾರೆ. ಯಾಕಂದ್ರೆ 33ರ ಹರೆಯದ ಚಿರಾಗ್ ಪಾಟೀಲ್ ಅವರು ಸಂದೀಪ್ ಪಾಟೀಲ್ ಅವರ ಮಗ. ಹಾಗೇ ನೋಡಿದ್ರೆ, ಸಂದೀಪ್ ಪಾಟೀಲ್ ವಿಶ್ವಕಪ್ ಆಡುತ್ತಿರುವಾಗ ಚಿರಾಗ್ ಪಾಟೀಲ್ ಇನ್ನೂ ಹುಟ್ಟಿರಲಿಲ್ಲ. ಆದ್ರೆ ಚಿಕ್ಕವನಿರುವಾಗ ಕ್ರಿಕೆಟ್ ಆಟವನ್ನು ಆಡುತ್ತಿರುವುದರಿಂದ ತನ್ನ ತಂದೆಯ ಪಾತ್ರವನ್ನು ಮಾಡಲು ಹೆಚ್ಚು ಕಷ್ಟವೇನೂ ಆಗಿರಲಿಲ್ಲ. ಆದ್ರೆ ನನ್ನ
ಕಿರಿಯ ಸಹೋದರನಂತೆ ನಾನು ನನ್ನ ತಂದೆಯಂತೆ ಕಾಣುವುದಿಲ್ಲ. ಆದ್ರೆ ನನ್ನ ನಡವಳಿಕೆಗಳು, ವರ್ತನೆ ಅವರಂತೆ ಇರುತ್ತವೆ. ಹೀಗಾಗಿ ನನಗೆ ಈ ಪಾತ್ರವನ್ನು ಮಾಡಲು ಹೆಚ್ಚು ಕಷ್ಟವಾಗಲಿಲ್ಲ ಅಂತಾರೆ ಚಿರಾಗ್ ಪಾಟೀಲ್.
ಇನ್ನು ನಾಯಕ ರಣವೀರ್ ಸಿಂಗ್ ಅವರು ಕಪಿಲ್ ದೇವ್ ಅವರ ಮನೆಯಲ್ಲಿ ಸುಮಾರು ಹತ್ತು ದಿನಗಳ ಕಾಲ ಕಳೆದಿದ್ದಾರೆ. ಕಪಿಲ್ ಮಾತನಾಡುವ ಶೈಲಿ, ಹಾವಭಾವಗಳನ್ನು ನೋಡಿ ಪಾತ್ರ ಜೀವ ತುಂಬುವ ಕೆಲಸ ಮಾಡಿದ್ದರು. ರಣವೀರ್‍ಗೆ ಹೋಲಿಕೆ ಮಾಡಿದ್ರೆ ನನಗೆ ದೊಡ್ಡ ಸವಾಲು ಆಗಿದ್ದು ಕ್ರಿಕೆಟ್. ಆದ್ರೆ ನಡವಳಿಕೆಗಳು ಸ್ವಾಭಾವಿಕವಾಗಿ ನನ್ನಲ್ಲಿದ್ದವು ಎಂದು ಪಾಟೀಲ್ ಹೇಳಿದ್ರು.
ಹಾಗಂತ ಇದು ಬರೀ ಚಿರಾಗ್ ಪಾಟೀಲ್ ಒಬ್ಬರ ಕಥೆಯಲ್ಲ. ಇದೇ ಅನುಭವ ವೆಸ್ಟ್ ಇಂಡೀಸ್ ಕ್ರಿಕೆಟಿಗರ ಪಾತ್ರವನ್ನು ಮಾಡಿರುವ ನಟರ ಕಥೆಯೂ ಹೀಗೆ ಆಗಿದೆ. ಭಾರತ ತಂಡದ ಆಟಗಾರ ಪೈಕಿ ತಂದೆಯ ಪಾತ್ರವನ್ನು ಚಿರಾಗ್ ಪಾಟೀಲ್ ಮಾತ್ರ ಮಾಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದ ಬಹುತೇಕ ಆಟಗಾರರ ಪಾತ್ರ ಅವರ ಮಕ್ಕಳ ಕೈಯಲ್ಲಿ ನಟಿಸುವಂತೆ ಮಾಡಿದ್ದಾರೆ ಕಬೀರ್ ಖಾನ್. ಗಾರ್ಡನ್ ಗ್ರೀನಿಚ್ ಪಾತ್ರದಲ್ಲಿ ಅವರ ಮಗ ಕಾರ್ಲ್ ಗ್ರಿನಿಚ್ ಕಾಣಿಸಿಕೊಂಡಿದ್ದರು. ಮಾಲ್ಕಂ ಮಾರ್ಷಲ್ (ಮಾರ್ಷಲ್ ಈಗಿಲ್ಲ) ಅವರ ಪಾತ್ರವನ್ನು ಅವರ ಮಗ ಮಾಲಿ ಮಾರ್ಷಲ್ ನಿಭಾಯಿಸಿದ್ದಾರೆ.
ಆದ್ರೆ ವಿಂಡೀಸ್ ತಂಡದ ಆಗಿನ ನಾಯಕ ಕ್ಲೈವ್ ಲಾಯ್ಡ್ ಅವರ ಪಾತ್ರವನ್ನು ಅವರ ಜೇಸನ್ ಲಾಯ್ಡ್ ಮಾಡಿಲ್ಲ. ಯಾಕಂದ್ರೆ ಅವರು ಎತ್ತರವಾಗಿರುವುದರಿಂದ ವೇಗಿ ಜೋಯಲ್ ಗಾರ್ನರ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಶಿವನಾರಾಯಣ್ ಚಂದ್ರಪಾಲ್ ಅವರ ಮಗ ಲ್ಯಾರಿ ಗೋಮ್ಸ್ ಪಾತ್ರದಲ್ಲಿದ್ದಾರೆ.
ಒಟ್ಟಿನಲ್ಲಿ ಕಬೀರ್ ಖಾನ್ ನಿದೇರ್ಶಿಸುತ್ತಿರುವ 83 ಸಿನಿಮಾ ಭಿನ್ನ- ವಿಭಿನ್ನವಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ದೀಪಿಕಾ ಪಡುಕೋಣೆ ಅವರು ಕಪಿಲ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಕೊರೋನಾ ವೈರಸ್‍ನಿಂದಾಗಿ ಥಿಯೇಟರ್‍ಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡೋದು ಕಷ್ಟ. ಹೀಗಾಗಿ ಆನ್ ಲೈನ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ರೂ ಅಚ್ಚರಿ ಏನಿಲ್ಲ.
ಆದ್ರೆ ಇಂತಹ ಚಲನಚಿತ್ರವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಿದ್ರೆ ಚೆಂದ ಅನ್ನೋ ಮಾತುಗಳು ಕೇಳಬರುತ್ತಿವೆ. 2019ರ
ಜೂನ್ 5ರಂದು ಚಿತ್ರ ಚಿತ್ರೀಕರಣ ಶುರುವಾಗಿತ್ತು. ಇದಕ್ಕು ಮೊದಲು ಅಂದ್ರೆ ಏಪ್ರಿಲ್ 2019ರ ಮೊದಲ ವಾರ ಧರ್ಮಶಾಲಾದಲ್ಲಿ ಬಲ್ವಿಂದರ್ ಸಂಧೂ ಮತ್ತು ಯಶ್‍ಪಾಲ್ ಶರ್ಮಾ ಅವರು ಕ್ರಿಕೆಟ್ ತರಬೇತಿಯನ್ನು ನೀಡಿದ್ದರು. ಆ ನಂತರವೇ ಶೂಟಿಂಗ್ ಶುರುವಾಗಿದ್ದು. ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ರೆ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆಯಾಗಬೇಕಿತ್ತು.








