Himanta Vs Kejriwal : ದೆಹಲಿ, ಅಸ್ಸಾಂ ಮುಖ್ಯಮಂತ್ರಿಗಳ ಟ್ವೀಟ್ ವಾರ್….
ಅಸ್ಸಾಂ ಮತ್ತು ದೆಹಲಿ ಮುಖ್ಯಮಂತ್ರಿಗಳ ಟ್ವೀಟ್ ವಾರ್ ಮುಂದುವರೆದಿದೆ. ಎರಡು ರಾಜ್ಯಗಳ ಅಭಿವೃದ್ಧಿ ಬಗ್ಗೆ ಮೂರು ದಿನಗಳಿಂದ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಅಸ್ಸಾಂನಲ್ಲಿ ಕೆಲವು ಶಾಲೆಗಳನ್ನು ಮುಚ್ಚಲಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆಯಾಗಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದಾನಿಂದ ಟ್ವೀಟ್ ವಾರ್ ಶುರುವಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಟ್ವೀಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ 2007 ರ ಚುನಾವಣಾ ಭರವಸೆಯನ್ನು ನೆನಪಿಸಿಕೊಂಡಿದ್ದಾರೆ. ದೆಹಲಿಯ ರಾಜಧಾನಿಯನ್ನು ಲಂಡನ್ ಮತ್ತು ಪ್ಯಾರಿಸ್‌ನಂತೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಲಿಲ್ಲವೇ? ನೆನಪಿಲ್ಲವೇ ಕೇಜ್ರಿವಾಲ್ ಎಂದು ಪ್ರಶ್ನಿಸಿದ್ದಾರೆ. ನಿಮಗೆ ಏನೂ ಮಾಡಲು ಸಾಧ್ಯಾವಾಗದ ಕಾರಣ ದೆಹಲಿಯನ್ನು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಸಣ್ಣ ಪಟ್ಟಣಗಳೊಂದಿಗೆ ಹೋಲಿಸಲು ಪ್ರಾರಂಭಿಸಿದ್ದೀರಿ ಎಂದು ಆರೋಪಿಸಿದ್ದಾರೆ. ದೆಹಲಿಯಂತಹ ನಗರದ ಸಂಪನ್ಮೂಲ ಬಿಜೆಪಿಗೆ ಸಿಕ್ಕರೆ ವಿಶ್ವದ ಶ್ರೀಮಂತ ನಗರವಾಗಲಿದೆ ಎಂದರು.
ಹಿಮಂತ ಬಿಸ್ವಾ ಶರ್ಮಾ ಅವರ ಟ್ವೀಟ್‌ಗೆ ಉತ್ತರಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ನನ್ನ ಪ್ರಶ್ನೆಗೆ ನೀವು ಉತ್ತರಿಸಿಲ್ಲ. ನಿಮ್ಮ ಸಾರ್ವಜನಿಕ ಶಾಲೆಯನ್ನು ನೋಡಲು ನಾನು ಯಾವಾಗ ಬರಬೇಕು? ಶಾಲೆ ಚೆನ್ನಾಗಿಲ್ಲದಿದ್ದರೂ ಪರವಾಗಿಲ್ಲ. ನಾವೆಲ್ಲ ಸೇರಿ ಬಗೆಹರಿಸಿಕೊಳ್ಳೋಣ,’’ ಎಂದರು.
ಅಸ್ಸಾಂನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸುದ್ದಿ ವರದಿಗಳಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಶಾಲೆಗಳನ್ನು ಮುಚ್ಚುವುದು ಪರಿಹಾರವಲ್ಲ, ದೇಶಾದ್ಯಂತ ಹೆಚ್ಚಿನ ಶಾಲೆಗಳನ್ನು ತೆರೆಯುವ ಅವಶ್ಯಕತೆಯಿದೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವಾ ಶರ್ಮಾ ಅವರು ಟ್ವೀಟ್‌ನಲ್ಲಿ, “ಕೇಜ್ರಿವಾಲ್! ಎಂದಿನಂತೆ ನೀವು ನಿಮ್ಮ ಮನೆಕೆಲಸವನ್ನು ಮಾಡದೆ ಮತ್ತು ಸತ್ಯವನ್ನು ತಿಳಿಯದೆ ಕಾಮೆಂಟ್ಗಳನ್ನು ಮಾಡಿದ್ದೀರಿ. ನಾನು ಅಸ್ಸಾಂನ ಶಿಕ್ಷಣ ಸಚಿವನಾಗಿದ್ದಾಗಿನಿಂದ ಇಲ್ಲಿಯವರೆಗೆ ರಾಜ್ಯ ಸರ್ಕಾರ 8,610 ಹೊಸ ಶಾಲೆಗಳನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಕಳೆದ ಏಳು ವರ್ಷಗಳಲ್ಲಿ ದೆಹಲಿಯಲ್ಲಿ ಎಷ್ಟು ಶಾಲೆಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.








