Stone pelting in Vadodara: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – 13 ಜನರ ಬಂಧನ…
ಗುಜರಾತ್ ನ ವಡೋದರದಲ್ಲಿ ಸೋಮವಾರ ರಾತ್ರಿ ಮತ್ತೆ ಕೋಮು ಗಲಭೆ ಉಂಟಾಗಿದೆ. ಸೋಮವಾರ ರಾತ್ರಿ ಗಣೇಶ ಮೂರ್ತಿಯನ್ನು ವಡೋದರಾ ನಗರದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದ ವೇಳೆ ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ ನಡೆದಿದೆ.
ಉದ್ವಿಘ್ನ ಘಟನೆಯಿಂದಾಗಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಣೇಶ ಮೂರ್ತಿಯನ್ನು ಶಾಂತಿಯುತವಾಗಿ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಎರಡು ಸಮುದಾಯದ 13 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿರುವುದಾಗಿ ವಡೋದರಾ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕಲ್ಲು ತೂರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಹೇಳಿದ್ದು, ಐಪಿಸಿ ಸೆಕ್ಷನ್ 143, 147,336,295 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಾಣಿಗೇಟ್ ದರ್ವಾಜಾದಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದ ಘಟನೆಯಲ್ಲಿ ಮಸೀದಿಯ ಮುಖ್ಯ ದ್ವಾರದ ಗಾಜು ಒಡೆದಿದ್ದು, ಶಾಂತಿ ಕಾಪಾಡಲು ವಡೋದರಾದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ವಡೋದರಾದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಜನರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ವಡೋದರಾ ಜಂಟಿ ಪೊಲೀಸ್ ಆಯುಕ್ತ (ಜಂಟಿ ಪೊಲೀಸ್ ಆಯುಕ್ತ) ಚಿರಾಗ್ ಕೊರಾಡಿಯಾ ಹೇಳಿದ್ದಾರೆ.








