ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ, ರಾಜಕೀಯ ಹಾಗೂ ಬೆಂಗಳೂರಿನ ಅಭಿವೃದ್ಧಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಯೌವನ, ಹಣ ಹಾಗೂ ಅಧಿಕಾರ ಒಂದೆಡೆ ಸೇರಬಾರದು. ಹಾಗಾದರೆ ಅದು ಬಹಳ ಅಪಾಯ ಎಂದು ಅವರು ಹೇಳಿದರು. ವಿದ್ಯಾರ್ಥಿ ಜೀವನದಿಂದಲೇ ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದಿರುವುದಾಗಿ ತಿಳಿಸಿದ ಡಿಕೆಶಿ, ತಾವು ಅಧಿಕಾರವನ್ನು ಅನುಭವಿಸಿದ್ದರೂ ಅಧಿಕಾರ ಶಾಶ್ವತವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡಿರುವುದಾಗಿ ಹೇಳಿದರು.
ತಮ್ಮ ಅಧಿಕಾರದ ಸ್ಥಾನವನ್ನು ಗೌರವದಿಂದ ನಿರ್ವಹಿಸಿಕೊಂಡು ಬಂದಿರುವುದಾಗಿ ಹೇಳಿದ ಅವರು, ಯಾರ ವಿರುದ್ಧವೂ ಅಧಿಕಾರದ ಸ್ಥಾನವನ್ನು ಬಳಸಿ ದ್ವೇಷ ಸಾಧಿಸುವುದಿಲ್ಲ. ಮುಕ್ತ ಮನಸ್ಸಿನಿಂದ ರಾಜ್ಯದ ಜನರ ಸೇವೆ ಮಾಡುತ್ತೇನೆ ಎಂದರು.
ರಾಜಕೀಯದಲ್ಲಿ ಅಧಿಕಾರದ ದುರುಪಯೋಗವಾಗಬಾರದು ಎಂದು ಹೇಳಿದ ಡಿಕೆಶಿ, ಪ್ರತಿಪಕ್ಷಗಳ ಟೀಕೆಗಳು ಇರಲಿ, ಆದರೆ ಅಂತಿಮವಾಗಿ ಜನರ ಸೇವೆಯೇ ಮುಖ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
‘ಮೂರು ದಿನ ನನ್ನ ಮಾತು ಕೇಳಲಿಲ್ಲ’
ಇತ್ತೀಚಿನ ವಿಧಾನಸಭೆಯ ಬೆಳವಣಿಗೆಗಳ ಕುರಿತು ಭಾವುಕರಾದ ಡಿಕೆಶಿ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮೂರು ದಿನದಿಂದ ನನ್ನ ಮಾತನ್ನು ಕೇಳಲಿಲ್ಲ. ನನ್ನ ವಿರುದ್ಧ ಧಿಕ್ಕಾರ ಕೂಗಿದ್ದೀರಿ. ಇದು ನನ್ನ ಮನಸ್ಸಿಗೆ ದೊಡ್ಡ ಗಾಯವಾಗಿದೆ ಎಂದು ಹೇಳಿದರು.
ಇದೇ ವೇಳೆ, ಬೆಂಗಳೂರಿನ ಅಭಿವೃದ್ಧಿಯ ಕುರಿತು ತಮ್ಮ ಕನಸುಗಳನ್ನು ಹಂಚಿಕೊಂಡ ಅವರು, ನಗರದಲ್ಲಿ ಯುವಕರ ಶಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನದ ದೊಡ್ಡ ಸಾಮರ್ಥ್ಯವಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕೋಟ್ಯಂತರ ಜನರು ಹಾಗೂ ಅಪಾರ ಪ್ರಮಾಣದ ವಾಹನಗಳಿರುವುದರಿಂದ ರಸ್ತೆ ವಿಸ್ತರಣೆ ಸೇರಿದಂತೆ ಹಲವು ಸವಾಲುಗಳಿವೆ. ಆದರೆ, ನಗರದಲ್ಲಿರುವ ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರತಿಭೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ದೊಡ್ಡ ಅವಕಾಶಗಳಿವೆ ಎಂದು ಡಿಕೆಶಿ ಹೇಳಿದರು.
ಪ್ರಧಾನಿ ಬೆಂಗಳೂರಿಗೆ ಬಂದಾಗ ಜನರಿಗೆ ಏನು ಬೇಕು ಎಂಬುದರ ಕುರಿತು ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ ಅವರು, ಟಾಟಾ ಸಮೂಹದ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭದಲ್ಲೂ ಬೆಂಗಳೂರಿನ ಅಭಿವೃದ್ಧಿ ಕುರಿತು ಹಲವು ಸಲಹೆಗಳನ್ನು ಪಡೆದಿದ್ದಾಗಿ ನೆನಪಿಸಿಕೊಂಡರು.
ಅಧಿಕಾರ ಶಾಶ್ವತವಲ್ಲ, ಆದರೆ ಜನಸೇವೆ ಶಾಶ್ವತವಾಗಿರಬೇಕು ಎಂಬ ಸಂದೇಶವನ್ನು ತಮ್ಮ ಮಾತುಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ.








