ಕರಾಚಿ, ಜೂನ್ 4: ಪಾಕಿಸ್ಥಾನದಲ್ಲಿ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇಲ್ಲಿಯವರೆಗೆ ಒಟ್ಟು 80,463 ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.
ಪಾಕ್ ಸಿಂಧ್ ಪ್ರಾಂತ್ಯದ ಮಾನವ ಸಂಪನ್ಮೂಲ ಸಚಿವ ಗುಲಾನ್ ಮುರ್ತಾಜಾ ಬಲೂಚ್ ಬಲಿಯಾದ ಬೆನ್ನಲ್ಲೇ ಇದೀಗ ಖೈಬರ್ ಪಕ್ತುಂಕ್ವಾ ಪ್ರಾಂತ್ಯದ ತೆಹರೀಕ್ ಇ ಇನ್ಸಾಫ್ ಪಕ್ಷದ ಶಾಸಕರೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ಕಳೆದ 10 ದಿನಗಳಿಂದ ಇಸ್ಲಾಮಾಬಾದ್ ನ ಆಸ್ಪತ್ರೆಯಲ್ಲಿದ್ದ ಮಿಯಾನ್ ಜೆಮ್ಶೆಡ್ ಕಾಕಾಖೀಲ್ (65) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಿಯಾನ್ ಜೆಮ್ಶೆಡ್ ಅವರ ಪುತ್ರ ಮಿಯಾನ್ ಓಮರ್ ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು.
ಪಾಕಿಸ್ಥಾನದಲ್ಲಿ ಇದೀಗ ಸಂಸದರು, ಶಾಸಕರಿಗೆ ಕೊರೊನಾ ಸೋಂಕು ತಗುಲಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವರು ಮೃತಪಟ್ಟಿದ್ದಾರೆ.

ಪಾಕಿಸ್ಥಾನದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಬುಧವಾರ ಒಂದೇ ದಿನದಲ್ಲಿ 4312 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 80,463ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.








