ಚಾಮರಾಜಪೇಟೆ ಗಣೇಶೋತ್ಸವಕ್ಕೆ ಅನುಮತಿ ನಿರಾಕರಣೆ – ಯಥಾಸ್ಥಿತಿ ಕಾಪಡಿಕೊಳ್ಳುವಂತೆ ಸುಪ್ರೀಂ ಸೂಚನೆ…
ಚಾಮರಾಜಪೇಟೆ ವಿವಾದಿತ ಮೈದಾನದಲ್ಲಿಗಣೇಶ ಪ್ರತಿಷ್ಠಾಪನೆಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ. 2 ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ಬುಧವಾರ ಗಣೇಶ ಹಬ್ಬ ಆಚರಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿತ್ತು. ಹೈಕೊರ್ಟ್ ಆದೇಶ ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ರಾಜ್ಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.
ಮೈದಾನದಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣವಿಲ್ಲ. ರಾಜ್ಯ ಸರ್ಕಾರವೇ ಕಾನೂನು ಸುವ್ಯವಸ್ಥೆಯನ್ನು ಗಮನಿಸುತ್ತದೆ. ಆದ್ದರಿಂದ ಗಣೇಶೋತ್ಸವಕ್ಕೆ ಅನುಮತಿ ನೀಡಬೆಕು ಎಂದು ತುಷಾರ್ ಮೆಹ್ತಾ ಕೋರ್ಟ್ ಗೆ ಮನವಿ ಮಾಡಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠವು ಮಂಗಳವಾರ ಈ ವಿಷಯವಾಗಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.
ನಂತರ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್ ಎಸ್ ಒಕಾ ಮತ್ತು ಎಂಎಂ ಸುಂದ್ರೇಶ್ ಅವರ ತ್ರಿಸದಸ್ಯ ಪೀಠವನ್ನು ರಚಿಸಿದ್ದರು.
ವಕ್ಫ್ ಬೋರ್ಡ್ ಪರ ಕಪಿಲ್ ಸಿಬಲ್, ದುಷ್ಯಂತ್ ದವೆ ಮಂಡಿಸಿದ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯಪೀಠ, ಇನ್ನು 2 ದಿನಗಳ ಕಾಲ ಮೈದಾನದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು, ಈ ವಿಷಯವನ್ನು ವಾಪಸ್ಸು ಹೈಕೋರ್ಟ್ ನಲ್ಲೇ ಇತ್ಯರ್ಥಪಡಿಸಬೇಕು ಎಂಬ ಆದೇಶ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಸದ್ಯಕ್ಕೆ ವಕ್ಫ್ ಮಂಡಳಿಯ ಪರ ತೀರ್ಪು ಬಂದಿದ್ದು ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.








