Kamal Rashid Khan: ಎದೆ ನೋವಿನ ಕಾರಣ ನೀಡಿ ಆಸ್ಪತ್ರೆ ಸೇರಿದ KRK
ನಟ ಮತ್ತು ಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಎದೆನೋವಿನ ಕಾರಣ ನೀಡಿ ಮುಂಬೈನ ಶತಾಬ್ದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಆರ್‌ಕೆ ಅವರಿಗೆ ಮಂಗಳವಾರ ಮುಂಬೈನ ಬೊರಿವಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಎರಡು ವರ್ಷಗಳ ಹಿಂದಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಕಮಲ್ ಅವರನ್ನು ಮುಂಬೈ ವಿಮಾನ ನಿಲ್ದಾಣದಿಂದ ನಿನ್ನೆ ಬೆಳಿಗ್ಗೆ ಬಂಧಿಸಿ, ಬಳಿಕ ಅವರನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 2020 ರಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ಕೇಸ್ ದಾಖಲಾಗಿತ್ತು. ಅಂದಿನಿಂದ ಎರಡು ವರ್ಷಗಳ ನಂತರ ಕಮಲ್ ಮುಂಬೈಗೆ ಮರಳಿದ್ದಾರೆ.
ಸೆಕ್ಷನ್ 294 ಅಡಿಯಲ್ಲಿ ಪ್ರಕರಣ
ಕಮಲ್ ಆರ್ ಖಾನ್ ಮೇಲೆ 2020 ರಲ್ಲಿ, ಯುವಸೇನೆಯ ಕೋರ್ ಕಮಿಟಿ, ಮಲಾಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ದಿವಂಗತ ನಟರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಬಗ್ಗೆ ಕಮಲ್ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎಂದು ಸಮಿತಿಯ ಸದಸ್ಯ ರಾಹುಲ್ ಕನಾಲ್ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಕಮಲ್ ವಿರುದ್ಧ ಪೊಲೀಸರು ಸೆಕ್ಷನ್ 294ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಮಲ್ ಬಂಧನದ ಕುರಿತು ಹೇಳಿಕೆ ನೀಡಿದ ರಾಹುಲ್ – “ನನ್ನ ದೂರಿನ ಆಧಾರದ ಮೇಲೆ ಕಮಲ್ ಅವರನ್ನು ಬಂಧಿಸಲಾಗಿದೆ. ಮುಂಬೈ ಪೊಲೀಸರ ಈ ಕಾರ್ಯವನ್ನು ನಾನು ಪ್ರಶಂಸಿಸುತ್ತೇನೆ. ಈ ಬಂಧನದ ಮೂಲಕ ಮುಂಬೈ ಪೊಲೀಸರು ಇಂತಹವರ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದರು.








