24 ಗಂಟೆಯಲ್ಲಿ 9,304 ಮಂದಿಯಲ್ಲಿ ಕೊರೊನಾ ದೃಢ, 260 ಮಂದಿ ಸಾವು
ನವದೆಹಲಿ : ಭಾರತದಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಇಂದು ಹೊಸದಾಗಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಬರೊಬ್ಬರಿ 9,304 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೇ ಮೊದಲ ಬಾರಿಗೆ 24 ಗಂಟೆಯಲ್ಲಿ ಸೋಂಕಿತರ ಸಂಖ್ಯೆ 9 ಸಾವಿರದ ಗಡಿ ದಾಟಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ನಿನ್ನೆ ಒಂದು ದಿನದಲ್ಲಿ 260 ಸೋಂಕಿತರು ಸಾವನ್ನಪ್ಪಿದ್ದು, 3,804 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,16,919ಕ್ಕೆ ಏರಿಕೆಯಾಗಿದೆ. ಈ ಪೈಕಿ 1,06,737 ಪ್ರಕರಣಗಳು ಸಕ್ರಿಯವಾಗಿದ್ದು, 1,04,107 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಈ ವರೆಗೂ 6,075 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಆಶಾದಾಯಕ ಬೆಳವಣಿಗೆಯೆಂದರೇ ಭಾರತದ ಒಟ್ಟು ಸೋಂಕಿತರಲ್ಲಿ ಸುಮಾರು 1 ಲಕ್ಷ ಜನರು ಗುಣಮುಖರಾಗಿದ್ದು, ಇತರೆ ದೇಶಗಳಿಗೆ ಹೋಲಿಸಿದೆ ಸೋಂಕಿನಿಂದ ಮುಕ್ತರಾದವರ ಪ್ರಮಾಣ ಶೇ 48.31ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 688 ಸರ್ಕಾರಿ ಮತ್ತು 208 ಖಾಸಗಿ ಕೋವಿಡ್ -19 ಪತ್ತೆ ಪ್ರಯೋಗಾಲಯಗಳಿದ್ದು ಇವರೆಗೂ 41.03 ಲಕ್ಷ ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ.








