ಅಮೆರಿಕದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು
ವಾಷಿಂಗ್ಟನ್ : ವರ್ಣಬೇಧ ನೀತಿ ವಿರುದ್ಧ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಮಧ್ಯೆ ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗಿನ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರೇ ಈ ಕೃತ್ಯ ಎಸೆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯುಎಸ್ ಸ್ಟೇಟ್ ಪಾರ್ಕ್ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
ಏನಿದು ಪ್ರಕರಣ ?
ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅಮೆರಿಕದ ಮಿನ್ನೆಪೊಲಿಸ್ ನಲ್ಲಿ ಮೇ 25ರಂದು ಒಂದು ಅಂಗಡಿಯಲ್ಲಿ 20 ಡಾಲರ್ ನೀಡಿ ಸಿಗರೇಟ್ ಖರೀದಿಸಿದ್ದ. ಅಂಗಡಿಯವರು ಆ ನೋಟು ನಕಲಿ ಎಂದು ಗೊತ್ತಾಗಿ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಬಂದಾಗ ಫ್ಲಾಯ್ಡ್ ಇನ್ನೂ ಅಂಗಡಿಯ ಹೊರಗೆ ಆತನ ಕಾರಿನಲ್ಲಿ ಕುಳಿತಿದ್ದ. ಪೊಲೀಸರು ಬಂದವರೇ ಅನಾಮತ್ತಾಗಿ ಆತನನ್ನು ಹಿಡಿದು ಹೊರಗೆಳೆದು, ತಮ್ಮ ಕಾರಿನ ಬಳಿ ಎಳೆದುಕೊಂಡು ಹೋದರು. ಇದನ್ನು ಜಾರ್ಜ್ ಫ್ಲಾಯ್ಡ್ ಪ್ರತಿಭಟಿಸಿದಾಗ ಓರ್ವ ಪೊಲೀಸ್ ಆತನನ್ನು ನೆಲಕ್ಕೆ ಒತ್ತಿಹಿಡಿದು, ಕುತ್ತಿಗೆಯ ಮೇಲೆ ತಮ್ಮ ಮೊಣಕಾಲೂರಿ ನಿಂತಿದ್ದ. ಸುಮಾರು ಎಂಟು ನಿಮಿಷ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದ ಪರಿಣಾಮ ಜಾರ್ಜ್ ಫ್ಲಾಯ್ಡ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಅಮೆರಿಕ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಬೃಹತ್ ಪ್ರತಿಭಟನೆಗಳು ಸ್ಫೋಟಗೊಂಡಿವೆ.








