ಮೈ ಶುಗರ್ ಕಾರ್ಖಾನೆ ಪುನರಾರಂಭ – ಕಬ್ಬು ಅರಿಯುವ ಕಾರ್ಯಕ್ಕೆ ಚಾಲನೆ..
ಸತತ 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈ ಶುಗರ್ ಕಾರ್ಖಾನೆಯನ್ನು ಮತ್ತೆ ಪುನರಾರಂಭ ಮಾಡಲಾಗಿದೆ. ನಗರದಲ್ಲಿರುವ ಮೈ ಶುಗರ್ ಕಾರ್ಖಾನೆಯ ಕಾರ್ಯಾರಂಭಕ್ಕೆ ಸಚಿವ ಕೆ ಗೋಪಾಲಯ್ಯ , ಕೆ ಸಿ ನಾರಾಯಣಗೌಡ ಹಾಗೂ ಸಂಸದೆ ಸುಮಲತಾ ಚಾಲನೆ ನೀಡಿದರು.
ಬಳಿಕ ಸಚಿವ ಕೆ.ಗೋಪಾಲಯ್ಯ, ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಲಾಭದಾಯಕವಾಗಿ ನಡೆಸಲು ರೈತರ ಸಹಕಾರ ಅಗತ್ಯ ಎಂದು ಹೇಳಿದರು. ರೈತರಿಗೆ ಅನುಕೂಲವಾಗಿರುವ ಈ ಸಕ್ಕರೆ ಕಾರ್ಖಾನೆಯಲ್ಲಿ 4 ಸಾವಿರ ಟನ್ ಕಬ್ಬು ಅರಿಯುವ ನಿರೀಕ್ಷೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಕಾರ್ಖಾನೆಯನ್ನು ನವೀಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಚಿವ ಡಾ. ಕೆ.ಸಿ ನಾರಾಯಣ ಗೌಡ, ಸಕ್ಕರೆ ಕಾರ್ಖಾನೆಯ ಪುನಾರರಂಭಕ್ಕೆ ಶ್ರಮಿಸಿದ ಈ ಭಾಗದ ರೈತ ಸಮುದಾಯ ಹಾಗೂ ಶಾಸಕರನ್ನು ಶ್ಲಾಘಿಸಿದರು. ಸಂಸದೆ ಸುಮಲತಾ, ರೈತರ ಹಲವಾರು ವರ್ಷಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಸಂಸದೆ ಸುಮಲತಾ, ಹಲವು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಇವತ್ತು ಗಣೇಶ ಹಬ್ಬದ ದಿನ ನಮಗೆ ಉಡುಗೊರೆ ಕೊಟ್ಟಿದ್ದಾರೆ. ಕಾರ್ಖಾನೆಯನ್ನು ಪುನರಾರಂಭ ಮಾಡಬಾರದೆಂದು ಹಲವರು ಹೋರಾಟ ನಡೆಸಿದ್ದರು. ಅದನ್ನೆಲ್ಲ ಮೀರಿ ನಮ್ಮ ಮುಖ್ಯಮಂತ್ರಿಗಳು ಕಾರ್ಖಾನೆ ಪ್ರಾರಂಭ ಮಾಡಿದ್ದಾರೆ. ಎಲ್ಲರೂ ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.







