Congress | ಮಹಿಳೆ ಮೇಲೆ ಅರವಿಂದ ಲಿಂಬಾವಳಿ ದರ್ಪ : ಕಾಂಗ್ರೆಸ್ ಟೀಕೆ
ಬೆಂಗಳೂರು : ಮನವಿ ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ಅವಾಜ್ ಹಾಕಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ ಬಿಜೆಪಿ. ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ ಎಂದು ಪ್ರಶ್ನಿಸಿದೆ.
https://twitter.com/INCKarnataka/status/1565975171244376069?s=20&t=2wLfI005coa2L_mKwXr-0A
ಮಹಿಳೆಗೆ ನಿಂದಿಸಿದ್ದರು ಮಾಧುಸ್ವಾಮಿ, ಮಹಿಳೆಗೆ ಹಲ್ಲೆ ಮಾಡಿದ್ದರು ಸಿದ್ದು ಸವದಿ, ಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು ರಮೇಶ್ ಜಾರಕಿಹೊಳಿ, ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದಿದ್ದರು ಅರಗ ಜ್ಞಾನೇಂದ್ರ, ಮಹಿಳೆಯ ಮೇಲೆ ದರ್ಪ ಮೆರೆದರು ಅರವಿಂದ್ ಲಿಂಬಾವಳಿ, ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ.. ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ? ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ? ನಳಿನ್ ಕುಮಾರ್ ಕಟೀಲ್ ಅವರೇ, ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.








