ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಅತ್ಯಂತ ಸ್ಫೋಟಕ ಹಂತಕ್ಕೆ ತಲುಪಿದೆ. ಈ ಪ್ರಕರಣದ ಬಗ್ಗೆ ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ ರಾಜ್ಯದ ಹಲವು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಕೂಡ ನಡೆದಿದೆ. ಈ ದಾಖಲೆಗಳನ್ನು ಇಟ್ಟುಕೊಂಡೇ ಆ ವ್ಯಕ್ತಿ ಇಡೀ ಸರ್ಕಾರವನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾನೆ ಎಂದು ಬಾಂಬ್ ಸಿಡಿಸಿದ್ದಾರೆ.
ಆ ವ್ಯಕ್ತಿಗೆ ಇಡೀ ಸರ್ಕಾರವೇ ಗುಲಾಮಗಿರಿ ನಡೆಸುತ್ತಿದೆ
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆ ಎಂದು ಆ ಕಿಂಗ್ ಪಿನ್ ಬಹಿರಂಗವಾಗಿ ಹೇಳುತ್ತಿದ್ದರೂ ಆತನನ್ನು ಮುಟ್ಟಲು ಪೊಲೀಸರಿಗೆ ಧೈರ್ಯವಿಲ್ಲವೇಕೆ ಎಂದು ಪ್ರಶ್ನಿಸಿದರು. ಹಲವು ಪ್ರಭಾವಿ ಪೊಲೀಸ್ ಅಧಿಕಾರಿಗಳ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವುದೇ ಇದಕ್ಕೆ ಕಾರಣ. ಸರ್ಕಾರದ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳೇ ಆತನ ಮುಂದೆ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸಿದ್ದರಾಮಯ್ಯ ಮುಗಿಸಲು ವ್ಯವಸ್ಥಿತ ಪಿತೂರಿ
ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿಸಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಅವರ ಸ್ವಪಕ್ಷದವರಿಂದಲೇ ಈ ಸ್ಟಿಂಗ್ ಸಂಚು ನಡೆದಿದೆ ಎಂದು ಕುಮಾರಸ್ವಾಮಿ ಆಪಾದಿಸಿದರು. ಪಕ್ಷದ ಕಾರ್ಯಕರ್ತೆಯೊಬ್ಬರನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಬಗ್ಗೆ ಕೆಟ್ಟದಾಗಿ ಹೇಳಿಕೆ ಕೊಡಿಸಲು ಒತ್ತಾಯಿಸಲಾಗುತ್ತಿದೆ. ಮಾಜಿ ಪ್ರಧಾನಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವ ಈ ವ್ಯಕ್ತಿಗೆ ಸರ್ಕಾರದ ಸಂಪೂರ್ಣ ರಕ್ಷಣೆ ಇದೆ. ಕೆ ಎನ್ ರಾಜಣ್ಣ ಅವರಂತಹ ಹಿರಿಯ ನಾಯಕರ ಬಾಯನ್ನೇ ಮುಚ್ಚಿಸಿರುವ ಈ ಸರ್ಕಾರ ಎಲ್ಲಿಗೆ ಹೋಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ನಮ್ಮ ಕುಟುಂಬ ಮುಗಿಸಲು ಹೊರಟವರಿಗೆ ಕಾಲವೇ ಉತ್ತರ ನೀಡಲಿದೆ
ನನ್ನ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ನೀವು ಎಷ್ಟೇ ಸಂಚು ರೂಪಿಸಿದರೂ ಅದಕ್ಕೆ ನಾನು ಹೆದರುವುದಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ನಿಮ್ಮ ಈ ಅಹಂಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಹಾಸನಾಂಬೆ ದೇವಾಲಯದ ಬಾಗಿಲು ತೆರೆದಾಗ ಅಲ್ಲಿ ಕುಳಿತು ನಿಮ್ಮ ಎಲ್ಲ ಕರ್ಮಕಾಂಡಗಳನ್ನು ಬಿಚ್ಚಿಡುತ್ತೇನೆ. ಕುಮಾರಸ್ವಾಮಿಯ ಇನ್ನೊಂದು ಮುಖವನ್ನು ಆಗ ನೀವು ನೋಡುತ್ತೀರಿ ಎಂದು ಅವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
2028ಕ್ಕೆ ಸಮ್ಮಿಶ್ರ ಸರ್ಕಾರ ಬರುವುದು ಶತಸಿದ್ಧ
ರಾಜ್ಯದ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿರುವ ಕುಮಾರಸ್ವಾಮಿ 2028ರ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ ನಡೆಯುತ್ತಿರುವ ಎಲ್ಲ ರಾಜಕೀಯ ಬೆಳವಣಿಗೆಗಳು ಬದಲಾವಣೆಯ ಮುನ್ಸೂಚನೆಯಾಗಿವೆ. ಅಂತಿಮವಾಗಿ ಸತ್ಯವೇ ಗೆಲ್ಲಲಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಈ ಇಡೀ ಪ್ರಕರಣದ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂಬುದು ನನಗೆ ಆಶ್ಚರ್ಯ ತಂದಿದೆ. ಅವರು ಬಾಯಿ ಬಿಡದಿದ್ದರೆ ಅನ್ಯಾಯಕ್ಕೆ ಅವರೇ ಬಲಿಯಾಗಲಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.








