ಮಂಗಳೂರು : ದೇಶದಲ್ಲಿ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಿ ರಾಷ್ಟ್ರೀಯ ಆಸ್ತಿಯಾಗಿದ್ದ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದೇ ಒಂದು ವರ್ಷ ಪೂರೈಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಸಾಧನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿ ಮೊಬೈಲ್ ಕಂಪನಿಯ ಹಿತಾಸಕ್ತಿ ಕಾಪಾಡಲು ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಮುಳುಗಿಸಿ ಲಕ್ಷಾಂತರ ಉದ್ಯೊಗಿಗಳನ್ನು ಬೀದಿಗೆ ತಳ್ಳಿರುವ ಸಾಧನೆಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಎನ್ ಡಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕಪ್ಪು ಹಣ ತರುವ ವಿಚಾರ ಹಳ್ಳ ಹಿಡಿದಿದೆ. ಜಿಡಿಪಿ ಪಾತಾಳಕ್ಕೆ ಕುಸಿದಿದ್ದು, ಈಗ ಕೊರೊನಾ ಕಾರಣ ಎಂದು ಹೇಳಲಾಗುತ್ತಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಕೊರೊನಾದಿಂದ ಜಿಡಿಪಿ ಕುಸಿಯುವುದಾದರೆ, ಅಮೆರಿಕದಲ್ಲಿ ಡಾಲರ್ ಮೌಲ್ಯ ಕುಸಿಯಬೇಕಿತ್ತು. ಅಲ್ಲಿ ಕೊರೋನದಿಂದ ತತ್ತರಿಸಿದ್ದರೂ, ಕರೆನ್ಸಿ ಮೌಲ್ಯ ಕುಸಿದಿಲ್ಲ ಎಂದ ರೈ, ದೇಶದಲ್ಲಿ ಪೂರ್ವಾಲೋಚನೆ ಇಲ್ಲದೆ ಲಾಕ್‌ಡೌನ್ ಮಾಡಿದ್ದರಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಶಾಹುಲ್ ಹಮೀದ್, ಅಬ್ದುಲ್ ರವೂಫ್, ಅಪ್ಪಿ, ನವೀನ್ ಡಿಸೋಜ, ಶಾಲೆಟ್ ಪಿಂಟೊ, ಶುಭೋದಯ ಆಳ್ವ, ಡಿ.ಕೆ.ಅಶೋಕ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.








