ರಾಮನಗರ : ರಾಜ್ಯ ರಾಜಕಾರಣದಲ್ಲಿ ಜೋಡೆತ್ತುಗಳೆಂದೇ ಗುರುತಿಸಿಕೊಂಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಈಗ ರಾಜಕೀಯ ಬಿರುಕು ಮೂಡಿದೆ. ಮೈತ್ರಿ ಸರ್ಕಾರದ ವೇಳೆ ಕುಚುಕು ದೋಸ್ತಿಗಳಂತೆ ವಿರೋಧಿಗಳಿಗೆ ಟಕ್ಕರ್ ನೀಡುತ್ತಿದ್ದ ಡಿಕೆಶಿ-ಹೆಚ್ ಡಿಕೆ ನಡುವೆ ಈಗ ಸಣ್ಣ ವೈಮನಸ್ಸು ಉಂಟಾಗಿದೆ.
ಹೌದು..! ಈ ಹಿಂದೆ ಮೈತ್ರಿ ಸರ್ಕಾರದ ದಿಗ್ಗಜರಂತೆ ಮೆರೆದ ಈ ಸ್ನೇಹಿತರು ಈಗ ಪರೋಕ್ಷವಾಗಿ ವಾಗ್ಯುದ್ಧ ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಚನ್ನಪಟ್ಟಣದಲ್ಲಿ ಹೆಚ್.ಡಿಕೆ ನೀಡಿದ ಹೇಳಿಕೆಗಳು.
ಚನ್ನಪಟ್ಟಣದಲ್ಲಿ ಮಾತನಾಡುತ್ತಾ ಕುಮಾರಸ್ವಾಮಿ, ನನಗೆ ಕಾಂಗ್ರೆಸ್ ನವರ ಋಣವಿಲ್ಲ, ಈ ರಾಜ್ಯದ ರೈತರ ಋಣವಷ್ಟೇ ಇರೋದು ಎನ್ನುವ ಮೂಲಕ ಕೈ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಕೆಲವರು ನನಗೆ ಸಪೋರ್ಟ್ ಮಾಡಿದ್ದೀನಿ ಎಂದು, ಅನುಕಂಪ ಗಿಟ್ಟಿಸಿಕೊಂಡು ಜೆಡಿಎಸ್ ಪಕ್ಷವನ್ನೇ ಮುಗಿಸುವ ಡಬಲ್ ಗೇಮ್ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಇದನ್ನ ಬಿಡಬೇಕು ಎನ್ನುವ ಎಂದು ಹೆಸರೇಳದೆ ಡಿಕೆ ಬ್ರದರ್ಸ್ ವಿರುದ್ಧ ಮಾರ್ಮಿಕವಾಗಿ ಕಿಡಿಕಾರಿದ್ದಾರೆ.
ಕಾರಣವೇನಿರಬಹುದು..?
ಈ ಹಿಂದೆ ಜೋಡೆತ್ತುಗಳಂತೆ ರಾಜ್ಯ ಸುತ್ತಿದ ಕುಮಾರಸ್ವಾಮಿ- ಶಿವಕುಮಾರ್ ನಡುವೆ ಹೀಗೆ ವೈಮನಸ್ಸು ಮೂಡಲು ಕಾರಣ ಹುಡುಕುತ್ತಾ ಹೋದರೇ ಸಿಗೋ ಉತ್ತರ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಡೆ.
ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್, ರಾಮನಗರದ ಪ್ರಭಾವಿ ರಾಜಕಾರಣಿಯಾದರೂ ಅವರು ಕನಕಪುರದ ಬಗ್ಗೆ ಮಾತ್ರ ತಲೆಕಡೆಸಿಕೊಳ್ಳುತ್ತಿದ್ದರು. ಯಾಕೆಂದರೆ ರಾಮನಗರ ಜೆಡಿಎಸ್ ಭದ್ರಕೋಟೆ. ಕನಕಪುರ ಬಿಟ್ಟು ಉಳಿದ ಕ್ಷೇತ್ರಗಳ ಬಗ್ಗೆ ಕಾಳಜಿ ವಹಿಸಿದರೆ ಕನಕಪುರದಲ್ಲಿ ಡಿಕೆಶಿಗೆ ಹೆಚ್ಡಿಕೆಯಿಂದ ರಾಜಕೀಯವಾಗಿ ತೊಂದರೆ ಆಗುತ್ತಿತ್ತು.
ಇದೇ ಕಾರಣಕ್ಕಾಗಿ ಇಷ್ಟುದಿನ ಡಿಕೆಶಿ, ಚನ್ನಪಟ್ಟಣ, ರಾಮನಗರ, ಮಾಗಡಿ ಕ್ಷೇತ್ರಗಳ ಬಗ್ಗೆ ಕ್ಯಾರೇ ಎನ್ನುತ್ತಿರಲ್ಲಿಲ್ಲ. ಆದರೆ ಈಗ ಕೆ.ಪಿ.ಸಿ.ಸಿ ಅಧ್ಯಕ್ಷರಾಗುತ್ತಿದ್ದಂತೆ ಡಿಕೆಶಿಯ ರಾಜಕೀಯ ವರಸೆಯೇ ಬದಲಾಗಿದೆ. ರಾಮನಗರದಲ್ಲಿ ಕಾಂಗ್ರೆಸ್ ಕೋಟೆ ಕಟ್ಟಲು ಕಾಂಗ್ರೆಸ್ ಕಟ್ಟಪ್ಪ ಪ್ಲಾನ್ ಮಾಡಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಡೆದ ರಾಮನಗರ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರನ್ನ ಕಾಂಗ್ರೆಸ್ ಗೆ ಸೆಳೆದು ಜೆಡಿಎಸ್ ನಿಂದ ಅಧಿಕಾರ ಕಿತ್ತುಕೊಂಡು ಕಾಂಗ್ರೆಸ್ ವಶಮಾಡಿಕೊಂಡಿದ್ದೆ ಸ್ಪಷ್ಟ ಉದಾಹರಣೆ.
ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕುಮಾರಸ್ವಾಮಿ ಈಗ ಹೆಸರೇಳದೆ ‘ಡಬಲ್ ಗೇಮ್ ರಾಜಕಾರಣ ಬಿಡಬೇಕು’ ಎಂದು ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.








