ಬೆಂಗಳೂರು : ಪೋಷಕರು ಯಾರೂ ಆತಂಕ ಪಡುವ ಅಗತ್ಯವಿಲ್ಲ, ಸದ್ಯಕ್ಕೆ ನಾವು ಶಾಲೆ ಆರಂಭಿಸಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಫೇಸ್ ಬುಕ್ ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೇ 30 ರಂದು ಶಾಲೆಗಳನ್ನು ಆರಂಭಿಸುವ ಬಗ್ಗೆ ಪೋಷಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ನಾವು ರಾಜ್ಯದಲ್ಲಿರುವ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ.
ಇದೇ ಜೂನ್ 10, 11, 12 ರಂದು ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ ನಡೆಯಲಿದೆ. ಪೋಷಕರ ಅಭಿಪ್ರಾಯಗಳು ಕ್ರೋಢಿಕರಣವಾಗಿ ಜೂನ್ 15ಕ್ಕೆ ಸರ್ಕಾರವನ್ನು ತಲುಪಬಹುದು. ನಂತರ ಶಾಲೆ ಆರಂಭಿಸಬೇಕೋ? ಬೇಡವೋ ಎಂಬುದನ್ನು ನಿರ್ಧಾರ ಮಾಡಲಾಗುವುದು. ಜುಲೈ ಒಂದರಿಂದ ಶಾಲೆಯನ್ನು ತೆರೆಯುವುದಿಲ್ಲ. ಅಭಿಪ್ರಾಯ ಸಂಗ್ರಹವಷ್ಟೇ ಎಂದು ಸ್ಪಷ್ಟ ಪಡಿಸಿದರು.
ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಲಾಬಿಗೆ ಮಣಿದಿದೆ ಎಂದು ವರದಿಯಾಗುತ್ತಿದೆ. ನಾವು ಯಾವ ಲಾಬಿಗೂ ಮಣಿದಿಲ್ಲ. ತರಾತುರಿಯಲ್ಲಿ ನಾವು ಶಾಲೆಯನ್ನು ತೆರೆಯುವುದಿಲ್ಲ. ಮಕ್ಕಳ ಸುರಕ್ಷತೆ ಜೊತೆಗೆ ಮಕ್ಕಳ ಕಲಿಕೆ, ಭವಿಷ್ಯವನ್ನು ಗಮನದಲ್ಲಿಟ್ಟು ನಿರ್ಧಾರವನ್ನು ಕೈಗೊಳ್ಳುತ್ತೇವೆ. ಸದ್ಯಕ್ಕೆ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ಪ್ರಾರಂಭ ಬೇಡ ಎಂಬ ಅಭಿಪ್ರಾಯ ಬಂದಿದೆ. ಪೋಷಕರ ಅಭಿಪ್ರಾಯ ಪಡೆದ ಬಳಿಕ ನಾವು ಶಾಲೆ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.








