ಬಡವರ ಹೊಟ್ಟೆ ಸೇರಬೇಕಿದ್ದ ಅನ್ನ ಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ದೊಡ್ಡ ದಂಧೆ ಇದೀಗ ಬಯಲಾಗಿದೆ. ಗದಗ ಪೊಲೀಸ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಸಂಯುಕ್ತ ಕಾರ್ಯಾಚರಣೆ ನಡೆಸಿ, ಈ ಅಕ್ರಮ ಜಾಲವನ್ನು ಭೇದಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಿಂದ ಹೊರಟಿದ್ದ ಲಾರಿ, ಗದಗ ಹಾಗೂ ಇಳಕಲ್ ಮಾರ್ಗವಾಗಿ ಗುಜರಾತ್ ಕಡೆಗೆ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿತ್ತು. ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಲಾರಿಯನ್ನು ತಡೆದು ಪರಿಶೀಲಿಸಿದಾಗ, ಪಡಿತರಕ್ಕಾಗಿ ನೀಡಲಾಗಿದ್ದ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಗೆ ಕಳ್ಳಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ದಾಳಿಯಲ್ಲಿ ಸುಮಾರು ₹14 ಲಕ್ಷ ಮೌಲ್ಯದ 347 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ₹29 ಲಕ್ಷ ಮೌಲ್ಯದ ಬೃಹತ್ ಲಾರಿಯನ್ನೂ ವಶಪಡಿಸಿಕೊಂಡಿದ್ದು, ಒಟ್ಟು ₹43 ಲಕ್ಷ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದ್ದು, ಈ ಹಿಂದೆ ಕೂಡ ಇದೇ ರೀತಿ ಅಕ್ರಮ ಸಾಗಣೆ ನಡೆದಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಬಡವರಿಗೆ ಮೀಸಲಾದ ಧಾನ್ಯವನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.








