Ballari: ವಿದ್ಯುತ್ ಸಂಪರ್ಕ ಸ್ಥಗಿತ – ICU ನಲ್ಲಿದ್ದ ಮೂವರು ರೋಗಿಗಳ ಸಾವು.. ?
ವಿದ್ಯುತ್ ಸಂಪರ್ಕ್ ಸ್ಥಗಿತಗೊಂಡು ವೆಂಟಿಲೇಟರ್ ನಲ್ಲಿದ್ದ ಮೂವರು ರೋಗಿಗಳು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ವೆಂಟಿಲೇಟರ್ ನಲ್ಲಿದ್ದ ಮೌಲಾ ಹುಸೇನ್ ಮತ್ತು ಚೆಟ್ಟಮ್ಮ ಹಾಗು ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ಮತ್ತೊಬ್ಬ ರೋಗಿ ಸಾವನ್ನಪ್ಪಿದ್ದಾರೆ.
ಮೂವರ ಮೃತಪಟ್ಟ ಬಳಿಕ ಘಟನೆಗೆ ಸಂಬಂಧಿಸಿ ವಿಮ್ಸ್(Vims) ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಐಸಿಯುದಲ್ಲಿದ್ದ ಉಳಿದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದೆ.
ವಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿಯಿಂದ ಬೆಳ್ಳಿಗ್ಗೆವರೆಗೂ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸಾವನ್ನಪ್ಪಿದ್ದ ಮೂವರ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಗಂಗಾಧರ ಗೌಡ ಅವರು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದು, ಮೂವರ ಸಾವಿಗೆ ಬೇರೆಯದ್ದೇ ಕಾರಣ ನೀಡಿದ್ದಾರೆ.ಈ ದಿನ ವಿಮ್ಸ್ ಆಸ್ಪತ್ರೆಯಲ್ಲಿ ಆಗಿರುವ ಸಾವುಗಳು ವಿವಿಧ ತೀವ್ರತರದ ಆರೋಗ್ಯ ಸಮಸ್ಯೆ ಗಳಿಂದ ಸಂಭವಿಸಿವೆ.
ಒಬ್ಬ ರೋಗಿಯು ವಿಷಪೂರಿತ ಹಾವಿನ ಕಡಿತದಿಂದ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದರೆ; ಇನ್ನೊಬ್ಬ ಮೃತರು ಬಹು ಅಂಗಾಗ ವೈಫಲ್ಯದಿಂದ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ, ಕೊನೆಗೆ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿರುತ್ತಾರೆ. ಹಾಗೆಯೇ ಮತ್ತೊಬ್ಬ ರೋಗಿಯು ಹಲವಾರು ದಿನಗಳಿಂದ ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದು ಕೊನೆಗೆ ಬಹು ಅಂಗಾಗಳ ಸೋಂಕಿನಿಂದ ಸಹಜ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.








