ದಿ. ಮುತ್ತಪ್ಪ ರೈ ಬರೆದಿಟ್ಟಿರುವ ವಿಲ್ ನಲ್ಲಿ ಯಾರ್ಯಾರಿಗೆ ಎಷ್ಟು ಪಾಲು…?
ಇತ್ತೀಚೆಗೆ ಕ್ಯಾನ್ಸರ್ ನಿಂದ ಮೃತಪಟ್ಟ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್. ಮುತ್ತಪ್ಪ ರೈ ಅವರಿಗೆ ಸುಮಾರು 1500ರಿಂದ 2000 ಕೋಟಿ ರೂ. ಮೊತ್ತದ ಚರಾ ಮತ್ತು ಸ್ಥಿರಾಸ್ತಿ ಇದೆ. ಸಾಯುವುದಕ್ಕೂ ಮುನ್ನವೇ ಅವರು ಬರೆದಿಟ್ಟ ವಿಲ್ ಪತ್ರವನ್ನು ಮುತ್ತಪ್ಪ ರೈ ವಕೀಲರಾದ ನಾರಾಯಣ ಸ್ವಾಮಿ ಅವರು ಬಹಿರಂಗಪಡಿಸಿದ್ದಾರೆ.
41 ಪುಟಗಳ ವೀಲ್ನಲ್ಲಿ ತನ್ನ ಆಸ್ತಿಯ ವಿವರವನ್ನು ರೈ ಅವರು ಬರೆದಿದ್ದಾರೆ. ಇಬ್ಬರು ಮಕ್ಕಳು, ಸಂಬಂಧಿಕರು ಹಾಗೂ ಮನೆ ಮತ್ತು ತೋಟದ ಕೆಲಸಗಾರು, ಚಾಲಕರು, ಗನ್ ಮ್ಯಾನ್ಗಳಿಗೆ ಏನೇನು ನೀಡಬೇಕು ಎಂಬುದನ್ನು ವೀಲ್ನಲ್ಲಿ ಬರೆದಿದ್ದಾರೆ. ರೈ ಅವರ ಆಸೆಯಂತೆ ಅವರ ಬರೆದಿಟ್ಟ ವಿಲ್ ಪ್ರಕಾರವೇ ಅವರ ಆಸ್ತಿಗಳನ್ನು ಹಂಚಲಾಗುತ್ತದೆ.
ಕಳೆದ 15-20 ವರ್ಷಗಳಿಂದ ತನ್ನ ಜೊತೆ ಇದ್ದ ಮನೆ ಕೆಲಸದವರಿಗೆ ನಿವೇಶನ ಸೇರಿದಂತೆ ತಲಾ ಮೂರು ಲಕ್ಷ ಆರ್ಥಿಕ ಸಹಾಯವನ್ನು ನೀಡಬೇಕು ಎಂದು ವಿಲ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ತಂದೆಯ ಮಾತಿನಂತೆ ಮಗ ರಿಕ್ಕಿ ರೈ ಮನೆಕೆಲಸದವರಿಗೆ ನಿವೇಶನ ಹಾಗೂ ತಲಾ ಮೂರು
ಲಕ್ಷ ರೂಪಾಯಿ ನೀಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಇನ್ನು ಇಬ್ಬರು ಗಂಡು ಮಕ್ಕಳಾದ ರಾಕಿ ರೈ ಮತ್ತು ರಿಕ್ಕಿ ರೈ ಹೆಸರಿಗೂ ಆಸ್ತಿ ಹಂಚಿಕೆ ಮಾಡಿದ್ದಾರೆ. ಬಿಡದಿ ಹಾಗೂ ಸದಾಶಿವನಗರ ಮನೆ, ಸಕಲೇಶಪುರದಲ್ಲಿರುವ ಕಾಫಿ ಎಸ್ಟೇಟ್, ದೇವನಹಳ್ಳಿ ಹಾಗೂ ಯಲಹಂಕದಲ್ಲಿರು ಜಾಗವನ್ನು ತನ್ನ ಎರಡನೇ ಮಗ ರಿಕ್ಕಿ ರೈ ಹೆಸರಿಗೆ ಬರೆದಿದ್ದಾರೆ. ಹಾಗೇ ಜಯ ಕರ್ನಾಟಕ ಸಂಘಟನೆ, ಷೇರು ವ್ಯವಹಾರ, ಮಂಗಳೂರು, ಬಂಟ್ವಾಳ, ಮೈಸೂರು ಮತ್ತು ಪುತ್ತೂರು ಸೇರಿದಂತೆ ಬೇರೆ ಬೇರೆ ಕಡೆ ಇರುವ ಜಾಗವನ್ನು ಹಿರಿಯ ಮಗ ರಾಕಿ ರೈ ಹೆಸರಿನಲ್ಲಿ ಮುತ್ತಪ್ಪ ರೈ ಬರೆದಿದ್ದಾರೆ.
ಹಾಗೇ ಜಯ ಕರ್ನಾಟಕ ಸಂಘಟನೆಯನ್ನು ಅಧ್ಯಕ್ಷ ಜಗದೀಶ್ ಅವರು ನೋಡಿಕೊಳ್ಳಲಿದ್ದು, ರಾಕಿ ರೈಗೆ ಸಂಘಟನೆಯನ್ನು ಯಾವುದೇ ಕಾರಣಕ್ಕೂ ಒಡೆದು ಹೋಗದಂತೆ ನೋಡಿಕೊಳ್ಳಬೇಕು ಎಂದು ರೈ ವಿಲ್ ನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಎರಡನೇ ಪತ್ನಿ ಅನುರಾಧ ಅವರಿಗೂ ತನ್ನ ಆಸ್ತಿಯಲ್ಲಿ ಪಾಲನ್ನು ನೀಡಿದ್ದಾರೆ. ಅನುರಾಧ ಜೊತೆಗಿದ್ದ ಸಮಯದಲ್ಲೇ ಎಚ್.ಡಿ.ಕೋಟೆಯಲ್ಲಿರು ಜಾಗ, ಚಿನ್ನಾಭರಣ, ಕಾರು, ಹಾಗೂ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ರೈ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಅಂತ ಅವರ ವಕೀಲರು ಹೇಳಿದ್ದಾರೆ.
ಹಾಗಂತ ಮುತ್ತಪ್ಪ ರೈ ಅವರಿಗೆ ವಿದೇಶದಲ್ಲಿ ಯಾವುದೇ ಆಸ್ತಿಗಳಿಲ್ಲ. ವಿದೇಶದಲ್ಲಿ ತನ್ನ ಮಗ ರಾಕಿ ರೈ ವ್ಯವಹಾರ ಮಾಡುತ್ತಿದ್ದಾರೆ. ವಿದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ ಎಂಬುದು ಈಗ ಸುಳ್ಳು ಅಂತ ಆಗಿದೆ.
ಒಟ್ಟಿನಲ್ಲಿ ಮುತ್ತಪ್ಪ ರೈ ಅವರು ಸುಮಾರು 1500ರಿಂದ ಎರಡು ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. ರಾಜ್ಯದ ವಿವಿಧ ಕಡೆ ಸುಮಾರು 600 ಎಕರೆಗೂ ಹೆಚ್ಚು ಜಾಗವಿದೆ. ತಾನು ಸಂಪಾದಿಸಿದ ಆಸ್ತಿಯ ಶೇ.20ರಷ್ಟು ಆಸ್ತಿಯನ್ನು ತನ್ನ ಆಪ್ತರಿಗೆ ಮತ್ತು ಕುಟುಂಬಸ್ಥರಿಗೆ ನೀಡಿದ್ದಾರೆ. ಇನ್ನುಳಿದ ಆಸ್ತಿಯನ್ನು ಮಕ್ಕಳ ಹೆಸರಿನಲ್ಲಿ ಬರೆದಿದ್ದಾರೆ.








