SC ST ಮಕ್ಕಳಿಗೆ ಉಚಿತ “ಕರ್ನಾಟಕ ದರ್ಶನ” ಮತ್ತೆ ಜಾರಿ…
ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ ನೀಡಿದೆ. ಕೋವಿಡ್ ಕಾರಣದಿಂದ ನಿಂತಿದ್ದ ಕರ್ನಾಟಕ ದರ್ಶನ ಯೋಜನೆಯನ್ನ ಈ ವರ್ಷದ ಮತ್ತೆ ಜಾರಿಗೆ ತರಲಾಗುತ್ತಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಈ ಪ್ರವಾಸವನ್ನು ಆಯೋಜಿಸಲಾಗಿದ್ದು ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಎಸ್ಸಿ ಪಿ ಮತ್ತು ಟಿ ಎಸ್ಪಿ ಯೋಜನೆಯಡಿ ‘ಕರ್ನಾಟಕ ದರ್ಶನ’ ಎಂಬ ಉಚಿತ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿದೆ.
ಕೋವಿಡ್ ಕಾರಣದಿಂದ ಕಳೆದ 2 ವರ್ಷದಿಂದ ಸ್ಥಗಿತಗೊಂಡಿದ್ದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಈ ವರ್ಷ ಮತ್ತೆ ಆರಂಭಿಸಲಾಗಿದೆ. ಪ್ರತಿ ತಾಲೂಕಿನಿಂದ 4 ದಿನಗಳ ಪ್ರವಾಸಕ್ಕೆ ಒಂದು ಬಸ್ ಸೌಲಭ್ಯ ಕಲ್ಪಿಸಲಾಗಿದ್ದು 50 ವಿದ್ಯಾರ್ಥಿಗಳು ಮತ್ತು ಅವರ ಜೊತೆ ಇಬ್ಬರು ಶಿಕ್ಷಕರು, ಅಧಿಕಾರಿಗಳು, ಡ್ರೈವರ್, ಗೈಡ್ ಸೇರಿ 55 ಜನರಿಗೆ ಅವಕಾಶ ನೀಡಲಾಗಿದೆ.
8ನೇ ತರಗತಿಯಲ್ಲಿ ಓದುತ್ತಿರುವ ಎಲ್ಲ ಎಸ್ಸಿ,ಎಸ್ಟಿ ಮಕ್ಕಳಿಗೂ ಈ ಉಚಿತ ಪ್ರವಾಸ ಯೋಜನೆ ಲಭ್ಯವಾಗುವುದಿಲ್ಲ. ಸೀಮಿತ ಸಂಖ್ಯೆಯ ಮಕ್ಕಳಿಗೆ ಮಾತ್ರ ಅವಕಾಶ ದೊರೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಸುಮಾರು 200ರಿಂದ 300 ಮಕ್ಕಳನ್ನು ಮಾತ್ರ ಆಯ್ಕೆ ಮಾಡಲು ಸೂಚಿಸಲಾಗಿದೆ.
ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ, ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಅವಕಾಶ ನೀಡಬೇಕು. 7ನೇ ತರಗತಿಯಲ್ಲಿ ಎ+, ಎ ಗ್ರೇಡ್ ಪಡೆದವರನ್ನು ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕ್ರೈಸ್ ವಸತಿ ಶಾಲೆಗಳಲ್ಲಿ ಓದುತ್ತಿರುವ ಎಸ್ಸಿಎಸ್ಟಿಮಕ್ಕಳನ್ನೂ ಸೇರಿಸಿ ಪಟ್ಟಿತಯಾರಿಸಬೇಕೆಂದು ಸೂಚಿಸಲಾಗಿದೆ.