MP DK Suresh | ಬಿಜೆಪಿ ಸರಕಾರದ ವಿರುದ್ಧ ಜನಾಂದೋಲನ ಅಗತ್ಯ
ಬೆಂಗಳೂರು : ಪದೇ ಪದೇ ವಿದ್ಯುತ್ ದರ ಏರಿಕೆ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಂತಹ ಶಾಕ್ ನೀಡುತ್ತಿರುವ ಭ್ರಷ್ಟ ಬಿಜೆಪಿ ಸರಕಾರದ ವಿರುದ್ದ ಜನಾಂದೋಲನದ ಅಗತ್ಯವಿದೆ.
ಭ್ರಷ್ಟಾಚಾರದ ಕೂಪದಲ್ಲಿ ತುಂಬಿ ತುಳುಕುತ್ತಿರುವ ಬಿಜೆಪಿ ಸರಕಾರದ ಆಡಳಿತ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ಸಂಸದ ಡಿ.ಕೆ ಸುರೇಶ್ ಆಕ್ರೋಶವ್ಯಕ್ತಪಡಿಸಿದರು.
ರಾಜರಾಜೇಶ್ವರಿ ನಗರದಲ್ಲಿ ಜ್ಞಾನಭಾರತಿ ವಾರ್ಡ್ 48 ರ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಕಾವ್ಯ ರಘುಗೌಡ ಅವರು ಆಯೋಜಿಸಿದ್ದ ಆಟೋ ಸಮಾವೇಶಕ್ಕೆ ಚಾಲನೆ ನೀಡಿ, ಆಟೋ ಚಾಲಕರುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಆಟೋ ಚಾಲಕರು ಕಷ್ಟ ಜೀವಿಗಳು. ತಮ್ಮದೇ ಆದ ಶೈಲಿಯಲ್ಲಿ ಹಗಲಿರುಳು ಸಮಾಜ ಸೇವೆ ಯಲ್ಲಿ ನಿರತರಾಗಿರುವ ವರ್ಗ. ದೇಶದ ಅಭಿವೃದ್ದಿಗೂ ಕೊಡುಗೆಯನ್ನು ನೀಡುತ್ತಿರುವ ಕಾರ್ಮಿಕ ವರ್ಗದ ಪ್ರಮುಖರು ಎಂದರೆ ತಪ್ಪಾಗಲಾರದು.
ಭಾರತೀಯ ಜನತಾ ಪಕ್ಷ ಕಳೆದ ಹಲವಾರು ವರ್ಷಗಳ ದುರಾಡಳಿತದಲ್ಲಿ ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಜನರ ಜೀವನ ನಡೆಸುವುದನ್ನೇ ದುಸ್ತರವಾಗಿಸಿದೆ.

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಉಳಿತಾಯವನ್ನ ಜಿಎಸ್‌ಟಿ ರೂಪದಲ್ಲಿ ತನ್ನ ಜೋಬಿಗೆ ತುಂಬಿಕೊಳ್ಳುತ್ತಿದೆ.
ಶೇಕಡಾ 40 ರಷ್ಟು ಲಂಚವನ್ನು ತಗೆದುಕೊಳ್ಳುತ್ತಿರುವ ಬಿಜೆಪಿ ಸರಕಾರ ವಿದ್ಯುತ್ ಬೆಲೆಯನ್ನು ಏರಿಸುವ ಮೂಲಕ ಇನ್ನಷ್ಟು ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಿದೆ.
ವಿದ್ಯುತ್, ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಿರುವ ಸರಕಾರ ಆಟೋ ಮೀಟರ್ ದರವನ್ನು ಜಾಸ್ತಿ ಮಾಡಲು ಚಿಂತಿಸುತ್ತಲೇ ಇಲ್ಲ.
ಭ್ರಷ್ಟಾಚರದ ದುರಡಾಳೀತದಿಂದ ಜನರು ಬೇಸತ್ತು ಹೋಗಿದ್ದು, ಬಿಜೆಪಿ ಸರಕಾರದ ವಿರುದ್ದ ಜನಾಂದೋಲನದ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು.
ಸಮಾಜವನ್ನು ಶುದ್ದಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರ ಕಾರ್ಮಿಕರ ಕೆಲಸವನ್ನು ಔಟ್ ಸೋರ್ಸಿಂಗ್ ಮೂಲಕ ಕಿತ್ತು ಹಾಕಲು ಬಿಜೆಪಿ ಸರಕಾರ ಮುಂದಾಗಿದೆ.
ರಾಷ್ಟ್ರ ಹಾಗೂ ರಾಜ್ಯದ ಮಟ್ಟದಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಡವರ ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಜನರ ಅಭ್ಯದಯಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ.
ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ಕೂಪದಲ್ಲಿ ಜನರನ್ನು ಶೋಷಿಸುತ್ತಿರುವ ಸರಕಾರಕ್ಕೆ ಜನರೇ ಬುದ್ದಿ ಕಲಿಸಬೇಕು ಎಂದು ಕರೆ ನೀಡಿದರು.








