MLA N. Mahesh – ಆಧಾರವಿಲ್ಲದೆ ಆರೋಪ ಮಾಡುವುದು ಯಾವ ಸೀಮೆ ಪಾಲಿಟಿಕ್ಸ್
ಚಾಮರಾಜನಗರ : ಕಾಂಗ್ರೆಸ್ ನವರು ಪೇ ಸಿಎಂ ಅಭಿಯಾನ ಮಾಡುವ ಮೂಲಕ ರಾಜ್ಯದ ಜನರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ದಯವಿಟ್ಟು ಈ ಕಾರ್ಯಕ್ರಮವನ್ನು ನಿಲ್ಲಿಸಿ, ಇದು ನಿಮಗೆ ಗೌರವ ತರುವುದಿಲ್ಲ ಎಂದು ಶಾಸಕ ಎನ್.ಮಹೇಶ್ ವಾಗ್ದಾಳಿ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಬೀದಿ ಬೀದಿಯಲ್ಲಿ ಪೇ ಸಿಎಂ ಎನ್ನುವ ಪೋಸ್ಟರ್ ಅಂಟಿಸುತ್ತಿರುವ ಕಾರ್ಯಕ್ರಮ ಮೋಸ ಹಾಗೂ ಅನ್ಯಾಯ ದಿಂದ ಕೂಡಿದೆ.
ಭಾರತ್ ಜೋಡೋ ಕಾರ್ಯಕ್ರ ಮ ಮಾಡುತ್ತಿರುವ ಸಂದರ್ಭದಲ್ಲಿ ಅದಕ್ಕೆ ತದ್ವಿರುದ್ದವಾಗಿ ಪೇ ಸಿಎಂ ಅಭಿಯಾನ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಾಕ್ಷಿ ಆಧಾರವಿಲ್ಲದೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುವುದು ಯಾವ ಸೀಮೆ ಪಾಲಿಟಿಕ್ಸ್. ಕಾಂಗ್ರೆಸ್ ನವರು ಸಾಕ್ಷಿ ಆಧಾರವಿಲ್ಲದೆ ಜಡ್ಜ್ಮೆಂಟ್ ಕೊಡುತ್ತಿರುವುದು ಭಾರತದ ನ್ಯಾಯ ಪರಂಪರೆಗೆ ಮಾಡುತ್ತಿರುವ ಅವಮಾನ.
ಹಳ್ಳಿಗಳಲ್ಲಿ ಪಂಚಾಯತಿ ಸೇರಿದಾಗ ಸಾಕ್ಷಿ ಕೇಳುತ್ತಾರೆ. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಾತ್ರ ಸಾಕ್ಷಿ ಕೇಳದೆ ಜಡ್ಜ್ಮೆಂಟ್ ನೀಡುತ್ತಾರೆ. ಇದು ಯಾವ ಸೀಮೆ ನ್ಯಾಯ.
ಇವರು ರಾಜಕೀಯ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಈ ಅಭಿಯಾನವನ್ನು ಇಲ್ಲಿಗೆ ನಿಲ್ಲಿಸಿ, ಇಲ್ಲದಿದ್ದರೆ ಸಿದ್ದರಾಮಯ್ಯ ಅವರ ಹಗರಣದ ಬಗ್ಗೆ ಮಾತಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.








