Siddaramaiah – ಚಿನ್ನದನಾಡು ಕೋಲಾರದಿಂದ ಹುಲಿಯಾ ಸ್ಪರ್ಧೆ ಪಕ್ಕಾ
ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆ ಹತ್ತಿರುವಾಗುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಪ್ರಶ್ನೆ ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕ ಹಾಗೂ ಕಾರ್ಯಕರ್ತರನ್ನು ಕಾಡುತ್ತಲೇ ಇದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಎದುರಿಸಿದ್ದ ಹುಲಿಯಾ, ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಯಾಸದ ಗೆಲುವು ಸಾಧಿಸಿದ್ದರು. ಆದ್ರೆ ಈ ಬಾರಿ ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಈ ನಡುವೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸೋದು ಪಕ್ಕಾ ಎಂದು ಅವರ ಆಪ್ತ ವಲಯದಿಂದ ಕೇಳಿಬಂದಿದೆ.
ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯರೊಂದಿಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದಾರಂತೆ.
ವಿವಿಧ ಸಮುದಾಯಗಳ ನಾಯಕರು ಕೂಡ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕೋಲಾರದಿಂದ ಸ್ಪರ್ಧಿಸಲು ಆಹ್ವಾನ ನೀಡಿವೆಯಂತೆ.
ಇದಕ್ಕೆ ಸಿದ್ದರಾಮಯ್ಯ ಅವರು ಬಹುತೇಕ ಸಮ್ಮತಿ ಸೂಚಿಸಿದ್ದಾರೆ ಎಂದು ಮಾಲೂರು ಶಾಸಕ ಕೆ.ವೈ. ನಂಜೇಗೌಡ ಹೇಳಿದ್ದಾರೆ.

ಹಾಗಾದ್ರೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದ್ರೆ ಗೆಲ್ತಾರಾ ?
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗೆಲುವಿಗೆ ಕೋಲಾರ ಹೇಳಿ ಮಾಡಿಸಿದ ಕ್ಷೇತ್ರ.
ಏಕೆಂದರೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ ಕುರುಬ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿವೆ.
ಜೊತೆಗೆ ಕೋಲಾರದಲ್ಲಿ ಪಕ್ಷಾತೀತವಾಗಿ ಸಿದ್ದರಾಮಯ್ಯಗೆ ದೊಡ್ಡ ಅಭಿಮಾನಿಗಳ ಬಳಗವಿದೆ.
ಇದು ಮಾತ್ರವಲ್ಲದೇ ಸಿದ್ದರಾಮಯ್ಯ ಅವಧಿಯಲ್ಲಿ ಕೆಸಿ ವ್ಯಾಲಿ ಯೋಜನೆಯನ್ನು ಕೊಡುಗೆ ನೀಡಿದ್ದು, ಅವರಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಗಳಿವೆ.
ಇನ್ನು ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಕೂಡ ಸಿದ್ದರಾಮಯ್ಯ ಬೆನ್ನಹಿಂದೆ ನಿಂತಿದ್ದು, ಒಂದು ವೇಳೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದ್ರೆ ಗೆಲುವು ಕಟ್ಟಿಟ್ಟಬುತ್ತಿ ಎಂದು ಅಂದಾಜಿಸಲಾಗುತ್ತಿದೆ.
ಆದ್ರೆ ಈ ಬಾರಿ ಕೋಲಾರದಲ್ಲಿ ಕಮಲ ಕಮಾಲ್ ಮಾಡುವ ಸಾಧ್ಯತೆಗಳಿವೆ. ಯಾಕಂದರೆ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಬಿಜೆಪಿ ಸೇರಿದ್ದು, ಕ್ಷೇತ್ರದಾದ್ಯಂತ ಪಾದರಸದಂತೆ ಸುತ್ತಾಡುತ್ತಾ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.
ಕಾಲಿಗೆ ಚಕ್ರಕಟ್ಟಿಕೊಂಡವರಂತೆ ವರ್ತೂರ್ ಪ್ರಕಾಶ್ ಕ್ಷೇತ್ರದಲ್ಲಿ ಓಡಾಡುತ್ತಾ ಮಿಂಚಿನ ಸಂಚಲನ ಮೂಡಿಸುತ್ತಿದ್ದಾರೆ.
ಸದ್ಯದ ಟ್ರೆಂಡ್ ಪ್ರಕಾರ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವರ್ತೂರ್ ಪ್ರಕಾಶ್ ಕಮಲ ಅರಳಿಸೋದು ಪಕ್ಕಾ ಎಂದು ಹೇಳಲಾಗುತ್ತಿದೆ.









