ಮುಂಬೈ, ಜೂನ್ 6 : ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮಿತಿಮೀರಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ.
ಇದೀಗ ಕೊರೋನಾ ಸೋಂಕಿಗೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಅನಿಲ್ ಸೂರಿ(77) ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ರಾಜೀವ್ ಸೂರಿ ಮಾಹಿತಿ ನೀಡಿದ್ದಾರೆ.
ಅನಿಲ್ ಸೂರಿ ಅವರಿಗೆ ಕಳೆದ ಜೂನ್ 2ರಂದು ಜ್ವರ ಕಾಣಿಸಿಕೊಂಡಿತು. ಮರು ದಿನ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮುಂಬೈನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯಕೀಯ ತಪಾಸಣೆಯ ವೇಳೆ ಅವರಿಗೆ ಕೊರೊನಾ ತಗುಲಿರುವುದು ಪತ್ತೆಯಾಯಿತು.
ಆದರೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಅನಿಲ್ ಸೂರಿ ಅವರು ಕರ್ಮಯೋಗಿ, ರಾಜ್ ತಿಲಕ್ ನಂತಹ ಹೆಸರಾಂತ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಅವರನ್ನು ಮೊದಲು ಲೀಲಾವತಿ ಮತ್ತು ಹಿಂದೂಜಾ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆದರೆ ಆ ಎರಡೂ ಆಸ್ಪತ್ರೆಗಳಲ್ಲಿ ಅನಿಲ್ ಸೂರಿಯವರಿಗೆ ಚಿಕಿತ್ಸೆ ಕೊಡಲು ಒಪ್ಪಲಿಲ್ಲ. ನಂತರ ಅವರನ್ನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಯಿತು. ಗುರುವಾರ ಸಂಜೆ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಆದರೆ ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ನಿಧನರಾದರು ಎಂದು ರಾಜೀವ್ ಸೂರಿ ತಿಳಿಸಿದ್ದಾರೆ.
ನಿಯಮಗಳಿಗೆ ಅನುಸಾರವಾಗಿ ಇಂದು ಮಧ್ಯಾಹ್ನ ಕೆಲವೇ ಮಂದಿಯ ಉಪಸ್ಥಿತಿಯಲ್ಲಿ ಅವರ ಅಂತಿಮ ಕ್ರಿಯೆ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ