ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ನಿವೃತ್ತಿ, ಮರಣ ಅಥವಾ ಇತರ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಿ ಎಂದು ಸಿಎಂ ಬಿ. ಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಬೇಕು. ಕೇಂದ್ರ ನೆರವಿನ ಅಮೃತ್ ಯೋಜನೆಯಡಿ ಕೇಂದ್ರದ ಪಾಲಿನ ಬಾಕಿ ಅನುದಾನ
ಪಡೆಯಲು ರಾಜ್ಯದ ಪಾಲಿನ ಭಾಗವಾಗಿ 209 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿಎಸ್ವೈ ಅಧಿಕಾರಿಗಳಿಗೆ ತಿಳಿಸಿದರು.
ಯಾವುದೇ ಕಾರಣಕ್ಕೂ ಜನರು ನೀರಿಗಾಗಿ ಪರದಾಡದಂತೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದಿಂದ ಬರುವ ಅನುದಾನಕ್ಕೆ ಯಾವುದೇ ತೊಡಕಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಇದೆ ವೇಳೆ ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.
ಇನ್ನೂ ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ 47.24 ಕೋಟಿ ರೂ. ಲಭ್ಯವಿದೆ. ಏಪ್ರಿಲ್ ಅಂತ್ಯದವರೆಗೆ 12 ನಗರಗಳಲ್ಲಿ ಖಾಸಗಿ ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ 23 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ, ಪೌರಾಡಳಿತ ಸಚಿವ ನಾರಾಯಣಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.








