ಬೆಂಗಳೂರು : ರಾಜ್ಯಸಭೆಗೆ ಮುಹೂರ್ತ ಫಿಕ್ಸ್ ಆಗಿದ್ದೆ ತಡ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಬಿಜೆಪಿ ಇಂದು ತನ್ನ ಕೋರ್ ಕಮಿಟಿ ಸಭೆ ನಡೆಸಿದೆ. ಬಿಜೆಪಿಯ ರಾಜ್ಯ ಕೋರ್ ಕಮಿಟಿ ಅಭ್ಯರ್ಥಿಗಳನ್ನು ಫೈನಲ್ ಮಾಡಿ, ಮೂರು ಹೆಸರುಗಳನ್ನು ಬಿಜೆಪಿ ಕೇಂದ್ರ ಸಮಿತಿಗೆ ಕಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳು ಖಾಲಿಯಾಗಿವೆ. ನಾಲ್ಕು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ. ಆದರೆ ಇಂದಿನ ಸಭೆಯಲ್ಲಿ ಮೂರು ಹೆಸರುಗಳನ್ನು ಫೈನಲ್ ಮಾಡಿದ್ದು ಅಚ್ಚರಿಯನ್ನು ಮೂಡಿಸಿದೆ.
ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರುಗಳನ್ನು ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಫೈನಲ್ ಮಾಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಕಳೆದ ಒಂದು ವಾರದಿಂದ ಬಿಜೆಪಿಯ ಟಿಕೆಟ್ ಯಾರಿಗೆ ಸಿಗಬಹುದು ಎಂಬ ಕುತೂಹಲವಿತ್ತು. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿತ್ತು. ರಮೇಶ ಕತ್ತಿ, ಹಾಲಿ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ತೇಜಸ್ವಿನಿ ಅನಂತಕುಮಾರ್, ಕೆ.ವಿ. ಕಾಮತ್, ವಿಜಯ ಸಂಕೇಶ್ವರ್ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರುಗಳನ್ನು ಪೈನಲ್ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಜೂನ್ 7 ರಂದು ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆ ನಡೆಯಲಿದೆ. ಈ ಸಭೆ ಬಳಿಕ ಅಧಿಕೃತ ಅಭ್ಯರ್ಥಿಗಳು ಯಾರು ಎಂದು ಗೊತ್ತಾಗಲಿದೆ. ಒಂದು ವೇಳೆ ಮೂರು ಹೆಸರುಗಳು ಕೇಂದ್ರ ಸಮಿತಿಯಲ್ಲೂ ಫೈನಲ್ ಆದರೆ ನಿರೀಕ್ಷೆಯಂತೆ ಪ್ರಭಾಕರ್ ಕೋರೆ ಮತ್ತು ರಮೇಶ್ ಕತ್ತಿ ಎರಡು ಸ್ಥಾನಗಳಿಗೆ ಸ್ಪರ್ಥಿಸಿದರೇ ಮೂರನೇ ಅಭ್ಯರ್ಥಿಯಾಗಿ ಉದ್ಯಮಿ ಪ್ರಕಾಶ್ ಶೆಟ್ಟಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸದ್ಯ ಬಿಜೆಪಿಗೆ ತನ್ನ ಶಾಸಕರ ಬಲದಿಂದ ಎರಡು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಆದರೆ ಮೂರು ಹೆಸರುಗಳನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಅಚ್ಚರಿ ಮೂಡಿಸಿದೆ. ಅಲ್ಲದೆ ಪ್ರಕಾಶ್ ಶೆಟ್ಟಿಯವರನ್ನು ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರಾ ಅಥಾವ ಈಗ ಕಳಿಸಿದ ಮೂರು ಹೆಸರುಗಳಲ್ಲಿ ಎರಡನ್ನು ಫೈನಲ್ ಮಾಡುತ್ತಾರಾ ಎಂಬ ಕುತೂಹಲವುಂಟು ಮಾಡಿದೆ.