ಟ್ಯೂಷನ್ ಗೆ ಹೋದ ಬಾಲಕಿ ಸಂಪ್ ನಲ್ಲಿ ಶವವಾಗಿ ಪತ್ತೆ…
ಟ್ಯೂಷನ್ ಗೆಂದು ಹೋದ ಬಾಲಕಿ ನೀರಿನ ಸಂಪ್ ನಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. NES ಬಡಾವಣೆಯ ಅಶ್ವಿನಿ ಮತ್ತು ಸುರೇಶ್ ಕುಮಾರ್ ದಂಪತಿಯ ಪುತ್ರಿ 10 ವರ್ಷದ ದಿವ್ಯಾ ಶವವಾಗಿ ಪತ್ತೆಯಾಗಿರುವ ಬಾಲಕಿ.
ಟ್ಯೂಷನ್ ಶಿಕ್ಷಕ ಕಾಂತರಾಜು (45) ಅವರ ಬಳಿ ನಿನ್ನೆ ಬೆಳಗ್ಗೆ 11 ಗಂಟೆಗೆ ಟ್ಯೂಷನ್ ಗೆಂದು ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದಿದ್ದಾಗ ಪೋಷಕರು ಆತಂಕಗೊಂಡು ಟ್ಯೂಷನ್ ಸೆಂಟರ್ ಮತ್ತು ಅಕ್ಕಪಕ್ಕದಲ್ಲಿ ವಿಚಾರಿಸಿದ್ದಾರೆ.
ಇದಾದ ನಂತರ ಸ್ಥಳೀಯರು ಬಾಲಕಿ ಹೊರಹೋಗಿರುವುದನ್ನು ಕಂಡು ನೀಡಿದ ಮಾಹಿತಿ ಮೇರೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ನೀರಿನ ಸಂಪ್ ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿದೆ.
ಬಾಲಕಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಮಳವಳ್ಳಿ ಪಟ್ಟಣ ಪೊಲೀಸರು ಶಿಕ್ಷಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿವೈ ಎಸ್ಪಿ ಎನ್.ನವೀನ್ ಕುಮಾರ್, ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ.
Mandya: 10-year-old girl’s body found inside water sump of building in Malavalli








