ಬಾಗಲಕೋಟೆ : ಬಾಗಲಕೋಟೆ ನಗರದಲ್ಲಿ ಬೀಳಗಿ ಶಾಸಕ ಮುರಗೇಶ ನಿರಾಣಿ ಒಡೆತನದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ವಿರುದ್ದ ರೈತರು ಪ್ರತಿಭಟನೆ ನಡೆಸಿದ್ದಾರೆ. ಬಾಗಲಕೋಟೆಯ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಎದುರು ಜಮಖಂಡಿ ತಾಲ್ಲೂಕಿನ ಮೈಗೂರು ಗ್ರಾಮದ ರೈತರು ಧರಣಿ ನಡೆಸಿದ್ದಾರೆ.
ಮೈಗೂರು ಗ್ರಾಮದ ಬಳಿ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಇದೆ. ಕಾರ್ಖಾನೆಯ ಸುತ್ತಮುತ್ತಲೂ ಹೊಲಗಳಿವೆ. ಕಾರ್ಖಾನೆಯಿಂದ ಉಂಟಾಗುವ ರಸಾಯನಿಕ ಕಲ್ಮಶ ಮಣ್ಣಿನ ಜೊತೆ ಮಿಶ್ರವಾಗುತ್ತಿದೆ. ಇದರಿಂದಾಗಿ ಬೆಳೆಗಳಿಗೆ ಬಾರಿ ಪ್ರಮಾಣದ ಹಾನಿಯುಂಟಾಗುತ್ತಿದೆ. ಅಲ್ಲದೇ ಕಾರ್ಖಾನೆಯ ಜಾಗದಲ್ಲಿ ಹಾಕಿರುವ ತ್ಯಾಜ್ಯದಿಂದಾಗಿ ಪಕ್ಕದ ಹೊಲಗಳ ಮಣ್ಣು, ಬೆಳೆ ಹಾಳಾಗುತ್ತಿದೆ ಅಂತಾ ರೈತರು ಆರೋಪಿಸಿದ್ದಾರೆ. ಮೂರು ವರ್ಷದಿಂದ ತೊಂದರೆ ಅನುಭವಿಸುತ್ತಿರುವ ರೈತರು ಕಾರ್ಖಾನೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ. ಸದ್ಯ ಕಾರ್ಖಾನೆಯಿಂದ 40 ಎಕರೆಗೂ ಹೆಚ್ಚು ಭೂಮಿಯ ಮಣ್ಣು ಹಾಗು ಬೆಳೆ ನಾಶವಾಗಿದೆ ಅಂತಾ ಹೇಳಲಾಗುತ್ತಿದೆ..