ನೀನು ಎಲ್ಲಿದ್ದೀಯಾ ಅಂತ ನಿನ್ನ ತಾಯಿಗೆ ಗೊತ್ತಾ..? ಇದು ನ್ಯೂಜಿಲೆಂಡ್ ವೇಗಿಯನ್ನು ಬ್ರಾಡ್ ಹ್ಯಾಡಿನ್ ಸ್ವಾಗತಿಸಿದ ರೀತಿ…!
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪ್ರಮುಖ ವೇಗಿ ಟ್ರೆಂಟ್ ಬೌಲ್ಟ್. 19 ವಯೋಮಿತಿಯ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಆಡಿದ್ದರು. 2008ರ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಪಡೆ, ಈಗಿನ ವಿಲಿಯಮ್ಸನ್ ಸಾರಥ್ಯ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಇದಕ್ಕೆ ಪ್ರತಿಕಾರವಾಗಿ 10 ವರ್ಷಗಳ ಬಳಿಕ ಅಂದ್ರೆ 2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ವಿಲಿಯಮ್ಸನ್ ಮತ್ತು ಟ್ರೆಂಟ್ ಬೌಲ್ಟ್ ವಿರಾಟ್ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಇದು ಈಗ ಹಳೆಯ ಕಥೆ.
ಆದ್ರೆ ಈಗ ಟ್ರೆಂಟ್ ಬೌಲ್ಟ್ ಅವರು ತನ್ನ ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ನಡೆದಿರುವಂತಹ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ. ಟ್ರೆಂಟ್ ಬೌಲ್ಟ್ ತನ್ನ 22ನೇ ಹರೆಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ. 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧದ
ಸರಣಿಗೆ ನ್ಯೂಜಿಲೆಂಡ್ ತಂಡಕ್ಕೆ ಸೇರ್ಪಡೆಗೊಂಡಿದ್ದರು.
ಆಗ ನಾನು ತಂಡಕ್ಕೆ ಆಯ್ಕೆಯಾಗುತ್ತೇನೆ ಅಂತ ಗೊತ್ತೇ ಇರಲಿಲ್ಲ. ಅದು ಅಲ್ಲದೆ ನಾನು ಒಂದು ವಾರಗಳ ಹಿಂದೆಯಷ್ಟೇ ನನ್ನ ಹಲ್ಲಿಗೆ ಪಟ್ಟಿಯನ್ನು ಹಾಕಿಸಿಕೊಂಡಿದ್ದೆ. ಆಗ ನಾನು ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದೇನೆ ಎಂಬ ವಿಚಾರ ತಿಳಿದು ಬಂತು. ತಕ್ಷಣವೇ ನಾನು ಮೊದಲು ಮಾಡಿದ್ದ ಕೆಲಸ ಅಂದ್ರೆ ದಂತ ವೈದ್ಯರ ಬಳಿ ಹೋಗಿ ಹಲ್ಲಿಗೆ ಹಾಕಿಸಿದ್ದ ಪಟ್ಟಿಯನ್ನು ತೆಗೆಸಿಕೊಂಡಿರುವುದು. ಯಾಕಂದ್ರೆ ನನಗೆ ಹಲ್ಲಿಗೆ ಪಟ್ಟಿ ಹಾಕಿಕೊಂಡು ಆಸ್ಟ್ರೇಲಿಯಾಗೆ ಹೋಗಲು ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ಟ್ರೆಂಟ್ ಬೌಲ್ಟ್.
ಬಳಿಕ ಮಾತು ಮುಂದುವರಿಸಿದ್ದ ಟ್ರೆಂಟ್ ಬೌಲ್ಟ್, ಆಸ್ಟ್ರೇಲಿಯಾ ವಿರುದ್ಧದ ಸರಣಿ ಅಂದ್ರೆ ಹೇಳುವುದೇ ಬೇಡ. ಆರಂಭದಲ್ಲಿ ಸಾಕಷ್ಟು ಭಯಗೊಂಡಿದ್ದೆ. ಒತ್ತಡಕ್ಕೂ ಸಿಲುಕಿದ್ದೆ. ಅಲ್ಲದೆ ಆಸ್ಟ್ರೇಲಿಯನ್ನರು ನನ್ನನ್ನು ಅವರ ಸಂಪ್ರಾದಯದಂತೆ ನಡೆಸಿಕೊಂಡರು ಎಂಬುದನ್ನು ನೆನಪಿಸಿಕೊಂಡ್ರು. ನನಗೆ ಇನ್ನೂ ನೆನಪಿದೆ. ನಾನು ಹೆದರಿಕೊಂಡೇ ಕ್ರೀಸ್‍ಗೆ ಹೋಗಿದ್ದೆ. ಆಗ ನನ್ನನ್ನು ಬ್ರಾಡ್ ಹ್ಯಾಡಿನ್ ದಿಟ್ಟಿಸಿ ನೋಡುತ್ತಿದ್ದರು. ಹಾಗೇ ಒಂದು ಮಾತು ಕೂಡ ಹೇಳಿದ್ದರು. ಗೆಳೆಯಾ. ನೀನು ಎಲ್ಲಿದ್ದೀಯಾ ಅಂತ ನಿನ್ನ ತಾಯಿಗೆ ಗೊತ್ತಾ ಅಂತ. ಆಗ ನಾನು ಸುಮ್ಮನಾದೆ. ಏನು
ಮಾತನಾಡಿಲ್ಲ. ನಾವು ಆ ಪಂದ್ಯವನ್ನು ಏಳು ರನ್ ಗಳಿಂದ ಗೆದ್ದುಕೊಂಡಿದ್ದೇವು. ಆಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಅವನು ನನಗೆ ಏನೋ ಹೇಳಿದ್ದ. ಅದಕ್ಕೆ ನಾನು ಸರಿಯಾಗಿಯೇ ತಿರುಗೇಟು ಕೊಟ್ಟೆ. ಅದಕ್ಕಿಂತ ಮಿಗಿಲಾಗಿ ಆ ಗೆಲುವಿನ ಸಂಭ್ರಮ ಇನ್ನೂ ನನ್ನ ಮನದಲ್ಲಿ ಹಾಗೇ ಉಳಿದುಕೊಂಡಿದೆ ಎಂದು ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.
67 ಟೆಸ್ಟ್ ಪಂದ್ಯಗಳನ್ನು ಆಡಿರುವ ಬೌಲ್ಟ್ ಅವರು 267 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಸದ್ಯ ನ್ಯೂಜಿಲೆಂಡ್ ಪರ ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಬೌಲ್ಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ರಿಚರ್ಡ್ ಹ್ಯಾಡ್ಲಿ ಅವರು 431 ವಿಕೆಟ್ ಕಬಳಿಸಿದ್ದಾರೆ. ಹಾಗೇ, ವೆಟ್ಟೋರಿ ಅವರು 361 ಹಾಗೂ ಟೀಮ್ ಸೌಥಿ ಅವರು 284 ವಿಕೆಟ್‍ಗಳನ್ನು ಕಬಳಿಸಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.








