IPS ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ – ಕೋರ್ಟ್ ಮೆಟ್ಟಿಲೇರಿದ M S ಧೋನಿ…
ಮ್ಯಾಚ್ ಫಿಕ್ಸಿಂಗ್ ಕುರಿತು ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ವಿರುದ್ಧ ಹೇಳಿಕೆ ನೀಡಿರುವ ಐಪಿಎಸ್ ಅಧಿಕಾರಿ ಜಿ.ಸಂಪತ್ ಕುಮಾರ್ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಂಪತ್ ಅವರು ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ವಕೀಲರ ಮೇಲೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಸಂಪತ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿ ಸಮನ್ಸ್ ಜಾರಿ ಮಾಡುವಂತೆ ಧೋನಿ ಒತ್ತಾಯಿಸಿದ್ದಾರೆ.
2014ರಲ್ಲಿ ಅಂದಿನ ಐಜಿ ಸಂಪತ್ ಕುಮಾರ್ ವಿರುದ್ಧ ಧೋನಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ನಲ್ಲಿ ಧೋನಿಗೆ ಸಂಬಂಧಿಸಿದ ಯಾವುದೇ ಹೇಳಿಕೆ ನೀಡದಂತೆ ಸಂಪತ್ ಕುಮಾರ್ ಅವರನ್ನು ನಿರ್ಬಂಧಿಸಲು ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ 100 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ದೇಶನ ನೀಡುವಂತೆ ಮಾಜಿ ನಾಯಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
18 ಮಾರ್ಚ್ 2014 ರಂದು, ಮಧ್ಯಂತರ ಆದೇಶದಲ್ಲಿ ಧೋನಿ ವಿರುದ್ಧ ಹೇಳಿಕೆಗಳನ್ನು ನೀಡದಂತೆ ಸಂಪತ್ ಕುಮಾರ್ ಅವರನ್ನು ನ್ಯಾಯಾಲಯ ನಿರ್ಬಂಧಿಸಿತ್ತು. ಇದಾದ ನಂತರವೂ ಸಂಪತ್ ಕುಮಾರ್ ಅವರು ಈ ಪ್ರಕರಣದಲ್ಲಿ ನ್ಯಾಯಾಂಗ ಮತ್ತು ರಾಜ್ಯದ ಹಿರಿಯ ವಕೀಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಧೋನಿ ತಮ್ಮ ಅರ್ಜಿಯಲ್ಲಿ ಸಂಪತ್ ಹೇಳಿಕೆಗಳನ್ನೂ ಉಲ್ಲೇಖಿಸಿದ್ದಾರೆ. MS Dhoni moves HC for contempt proceedings against IPS officer