ಕೊರೋನಾ ಸವಾಲನ್ನು ಎದುರಿಸಿ ಜಯ ಗಳಿಸಿದ 94 ವರ್ಷದ ವೃದ್ಧ

ನೋಯ್ಡಾ, ಜೂನ್ 10: ವಯಸ್ಸಾದವರಿಗೆ ಕೊರೊನಾ ಸೋಂಕಿನ ಅಪಾಯ ಜಾಸ್ತಿ ಎಂಬ ಮಾತಿದೆ. ಆದರೆ ಉತ್ತರಪ್ರದೇಶದ ನೋಯ್ಡಾದ 94 ವರ್ಷದ ವೃದ್ಧರೊಬ್ಬರು ಕೊರೊನಾ ಸವಾಲನ್ನು ಎದುರಿಸಿ ಕೊರೊನಾ ಸೋಂಕಿತರಿಗೆ ಆತ್ಮವಿಶ್ವಾಸವನ್ನು ತುಂಬಿದ್ದಾರೆ.
ಉತ್ತರಪ್ರದೇಶದ ನೋಯ್ಡಾದಲ್ಲಿರುವ ಗೌತಮಬುದ್ಧ ನಗರದ 94 ವರ್ಷದ ನಿವಾಸಿಯೊಬ್ಬರಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಗೌತಮ ಬುದ್ಧ ನಗರದ ಶಾರದಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಇವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.
ಅವರನ್ನು ಆಸ್ಪತ್ರೆಯಿಂದ ಬೀಳ್ಕೊಡುವಾಗ ಆಸ್ಪತ್ರೆಯ ವೈದ್ಯ ಸುಹಾಸ್ ಲಾಲಿನಾಕೆರೆ ಯತಿರಾಜ್ ಅವರು ನೀವು ಅನೇಕರಿಗೆ ಕೊರೊನಾ ಸೋಂಕಿನ ಎದುರು ಹೋರಾಡಲು ಪ್ರೇರಣೆ ನೀಡಿದ್ದೀರಿ. ಅಷ್ಟೇ ಅಲ್ಲ ನಮಗೆಲ್ಲರಿಗೂ ಮತ್ತಷ್ಟು ಕಠಿಣ ಪರಿಶ್ರಮದಿಂದ ಕೊರೊನಾ ಸವಾಲನ್ನು ಎದುರಿಸಲು ಸ್ಪೂರ್ತಿ ನೀಡಿದ್ದೀರಿ. ನೀವು ಬಹಳಷ್ಟು ವರ್ಷ ಇನ್ನಷ್ಟು ಆರೋಗ್ಯಕರ ಜೀವನ ನಡೆಸಬೇಕು ಎಂದು ನಾವೆಲ್ಲರೂ ಬಯಸುತ್ತೇವೆ ಎಂದು ಹಾರೈಸಿದ್ದಾರೆ.








