ADVERTISEMENT
Monday, November 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬ್ಲಿಂಕಿಟ್ ಮೂಲಕ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೇ ಬಂತು ಚಾಕು-ಕೊತ್ವಾಲ್ ರಾಮಚಂದ್ರನ ಗೂಂಡಾಗಿರಿ ಸಂಸ್ಕೃತಿ ಮತ್ತೆ ಜೀವಂತ! ಡಿಕೆ, ಪಿಕೆ, ಬಿಕೆಗಳ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಗುಡುಗಿದ ಬಿ.ವೈ. ವಿಜಯೇಂದ್ರ

Shwetha by Shwetha
November 9, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ದ್ವೇಷವು ಪ್ರಜಾಪ್ರಭುತ್ವದ ಎಲ್ಲೆ ಮೀರಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಆನ್‌ಲೈನ್ ಡೆಲಿವರಿ ಸಂಸ್ಥೆಯಾದ ಬ್ಲಿಂಕಿಟ್ ಮೂಲಕ ಚಾಕು ಹಾಗೂ ಚೂರಿಗಳನ್ನು ಆರ್ಡರ್ ಮಾಡಿ ಕಳುಹಿಸಿರುವ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರತಿಪಕ್ಷ ನಾಯಕರ ಮನೆಗೇ ಹಾಡಹಗಲೇ ಹರಿತವಾದ ಆಯುಧಗಳನ್ನು ರವಾನಿಸಿರುವ ಈ ಪ್ರಕರಣವು ಇದೀಗ ರಾಜಕೀಯವಾಗಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಘಟನೆಯಿಂದ ಕೆರಳಿರುವ ಬಿಜೆಪಿ ನಾಯಕರು ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ದೌಡಾಯಿಸಿ ನೈತಿಕ ಬೆಂಬಲ ಸೂಚಿಸಿದ್ದಲ್ಲದೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ನಿಯೋಗದಲ್ಲಿ ತೆರಳಿ ದೂರು ಸಲ್ಲಿಸುವ ಮೂಲಕ ದುಷ್ಕರ್ಮಿಗಳ ತಕ್ಷಣದ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಅವರ ನಿವಾಸದ ಮುಂದೆ ಏಕಾಏಕಿ ನಾಲ್ಕು ಬೈಕ್‌ಗಳಲ್ಲಿ ಬಂದಿಳಿದ ಬ್ಲಿಂಕಿಟ್ ಡೆಲಿವರಿ ಸಿಬ್ಬಂದಿ, ಚಾಕು ಮತ್ತು ಚೂರಿಗಳಿದ್ದ ಪೋಸ್ಟ್ ಕವರ್‌ಗಳನ್ನು ಒಳಗೆ ತಲುಪಿಸಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನಿವಾಸದ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಡೆಲಿವರಿ ಸಿಬ್ಬಂದಿಯನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಡೆಲಿವರಿ ಸಿಬ್ಬಂದಿಯ ಜೊತೆಯಲ್ಲಿಯೇ ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐಗೆ ಸೇರಿದ ಇಬ್ಬರು ಯುವಕರು ಕೂಡ ಹಾಜರಿದ್ದರು ಎನ್ನಲಾಗಿದೆ. ಪೊಲೀಸರ ಪ್ರಶ್ನೆಯಿಂದ ವಿಚಲಿತರಾಗಿ ಆರಂಭದಲ್ಲಿ ಹಿಂದಿರುಗಲು ಮುಂದಾದ ಡೆಲಿವರಿ ಸಿಬ್ಬಂದಿಯನ್ನು ತಡೆದ ಆ ಇಬ್ಬರು ಯುವಕರು, ಮತ್ತೆ ಒಳಗೆ ಹೋಗಿ ಆ ಕವರ್‌ಗಳನ್ನು ನೇರವಾಗಿ ಛಲವಾದಿ ನಾರಾಯಣಸ್ವಾಮಿ ಅವರಿಗೇ ನೀಡುವಂತೆ ತೀವ್ರ ಒತ್ತಾಯ ಹೇರಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಡೆಲಿವರಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸುತ್ತಿದ್ದಂತೆಯೇ, ಎನ್‌ಎಸ್‌ಯುಐ ಕಾರ್ಯಕರ್ತರೆನ್ನಲಾದ ಇಬ್ಬರು ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಇಡೀ ಕೃತ್ಯವನ್ನು ಎನ್‌ಎಸ್‌ಯುಐ ಮತ್ತು ಕಾಂಗ್ರೆಸ್ ಕಾರ್ಯಕರ್ತರೇ ಎಸಗಿದ್ದಾರೆ ಎಂದು ಬಿಜೆಪಿ ನೇರ ಆರೋಪ ಮಾಡಿದೆ.

Related posts

ಹೌದು ನಾನು ಬಲಿತ ದಲಿತನೇ: ರಾಜಧಾನಿಯಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಮುಂದೆಯೇ ಹೆಚ್‌ಡಿಕೆ ವಿರುದ್ಧ ಯುವ ಕಾಂಗ್ರೆಸ್ ಬ್ಯಾನರ್ ಅಸ್ತ್ರ!

ಹೌದು ನಾನು ಬಲಿತ ದಲಿತನೇ: ರಾಜಧಾನಿಯಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಮುಂದೆಯೇ ಹೆಚ್‌ಡಿಕೆ ವಿರುದ್ಧ ಯುವ ಕಾಂಗ್ರೆಸ್ ಬ್ಯಾನರ್ ಅಸ್ತ್ರ!

November 9, 2026
ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

November 9, 2026

ತಮ್ಮ ನಿವಾಸಕ್ಕೆ ಚಾಕುಗಳನ್ನು ಕಳುಹಿಸಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಈ ಆಯುಧಗಳನ್ನು ಬುಕ್ಕಿಂಗ್ ಮಾಡಿರುವ ವ್ಯಕ್ತಿಯ ಹೆಸರು ವಿನಯ್ ಕುಮಾರ್ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದರು. ಕೇವಲ ನನಗಷ್ಟೇ ಅಲ್ಲದೆ, ನನ್ನ ಆಪ್ತ ಸಹಾಯಕ ಮಲ್ಲಪ್ಪ ಅವರಿಗೂ ಹತ್ತು-ಹನ್ನೆರಡು ಚಾಕು, ಚೂರಿಗಳನ್ನು ಬುಕ್ ಮಾಡಿ ಕಳುಹಿಸಿದ್ದಾರೆ ಎಂದು ಆಘಾತಕಾರಿ ಮಾಹಿತಿ ನೀಡಿದರು. ಮೊನ್ನೆ ಕೋಲಾರದಲ್ಲಿ ನಡೆದ ಹೋರಾಟದ ವೇಳೆ ಮಾತನಾಡುತ್ತಾ, ಕಾಂಗ್ರೆಸ್ ಇದೇ ರೀತಿ ಅರಾಜಕತೆ ಸೃಷ್ಟಿಸಿದರೆ ಜನರು ಆ ಪಕ್ಷವನ್ನು ತುಂಡು ತುಂಡಾಗಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಹೇಳಿದ್ದೆ. ನನ್ನ ಆ ಮಾತಿಗೆ ಪ್ರತಿಯಾಗಿ ಕಾಂಗ್ರೆಸ್‌ನವರು ಚಾಕು, ಚೂರಿಗಳನ್ನು ಆರ್ಡರ್ ಮಾಡಿ ನನ್ನ ಮನೆಗೆ ಕಳುಹಿಸುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಈ ಹಿಂದೆ ಇದ್ದ ಕೊತ್ವಾಲ್ ಸಂಸ್ಕೃತಿ ಮತ್ತೆ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿನಿಂದಲೇ ಇಂತಹ ಕೃತ್ಯ ನಡೆಯುತ್ತಿದೆ ಎಂಬ ಬಲವಾದ ಅನುಮಾನವಿದೆ ಎಂದರು. ಇದಕ್ಕೆಲ್ಲ ನಾವು ಹೆದರುವ ಪ್ರಶ್ನೆಯೇ ಇಲ್ಲ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಕಾನೂನು ಹೋರಾಟ ನಡೆಸುವುದಲ್ಲದೆ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿ ತೀವ್ರ ಹೋರಾಟ ನಡೆಸುತ್ತೇವೆ ಎಂದು ಗುಡುಗಿದರು.

ಘಟನೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಗೋಪಾಲಯ್ಯ, ಕೃಷ್ಣಪ್ಪ, ಸಿ.ಕೆ. ರಾಮಮೂರ್ತಿ ಮತ್ತು ವಿಶ್ವನಾಥ್ ಸೇರಿದಂತೆ ಪ್ರಮುಖ ನಾಯಕರು ಛಲವಾದಿ ಅವರ ನಿವಾಸಕ್ಕೆ ಭೇಟಿ ನೀಡಿ ಬಳಿಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಕಳೆದ ಮೂರೂವರೆ ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕೇಳುವವರಿಲ್ಲದಂತಾಗಿದೆ. ಸಾಮಾನ್ಯವಾಗಿ ಮಚ್ಚು, ಲಾಂಗ್‌ಗಳನ್ನು ರೌಡಿಗಳು ಹಿಡಿಯುತ್ತಾರೆ, ಆದರೆ ಇಲ್ಲಿ ಕಾಂಗ್ರೆಸ್ ಪಕ್ಷದವರೇ ವಿರೋಧ ಪಕ್ಷದ ನಾಯಕರ ಮನೆಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಛಲವಾದಿ ಅವರ ಮನೆಯ ಸಮೀಪದಲ್ಲೇ ಪೊಲೀಸ್ ಆಯುಕ್ತರ ಕಚೇರಿ ಹಾಗೂ ನ್ಯಾಯಾಧೀಶರ ಮನೆಯೂ ಇದೆ. ಇಷ್ಟಿದ್ದರೂ ಚಾಕು, ಚೂರಿ, ಮಚ್ಚುಗಳನ್ನು ಕಳುಹಿಸುತ್ತಾರೆ ಎಂದರೆ ಇದು ಪೊಲೀಸರ ನೇರ ವೈಫಲ್ಯವಾಗಿದೆ. ಯಾವುದೇ ವ್ಯಕ್ತಿಯ ಮನೆಗೆ ಗನ್, ಮಚ್ಚುಗಳನ್ನು ಕಳುಹಿಸಿದರೆ ಅದು ಕೊಲೆಯ ಪ್ರಯತ್ನವಾಗುತ್ತದೆ. ಆದ್ದರಿಂದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಾರದೆಂದು ನಾವು ಸುಮ್ಮನಿದ್ದೇವೆ. ಆದರೆ ಕಾಂಗ್ರೆಸ್‌ನವರು ಜಿರಳೆ ಪಾರ್ಟಿಯವರ ಜೊತೆ ಸೇರಿಕೊಂಡು ಜಿರಳೆಗಳಂತೆ ವರ್ತಿಸಿದರೆ ಅದಕ್ಕೆ ತಕ್ಕಂತೆ ಹಿಟ್ ಹೊಡೆಯುವುದು ನಮಗೂ ತಿಳಿದಿದೆ. ಇದು ಮುಂದುವರಿದರೆ ನಾವು ಕೂಡ ಅದೇ ರೀತಿ ಉತ್ತರ ನೀಡಬೇಕಾಗುತ್ತದೆ ಎಂದು ಅಶೋಕ್ ನೇರ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಪಕ್ಷವು ತಾನೊಂದು ಗೂಂಡಾ ಸರ್ಕಾರ ಎಂಬುದನ್ನು ಜನರಿಗೆ ತೋರಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಕೊತ್ವಾಲ್ ರಾಮಚಂದ್ರ ಅವರೊಂದಿಗೆ ಗೂಂಡಾಗಿರಿ ಮಾಡಿಕೊಂಡು ಬಂದಿರುವವರು ಕಾಂಗ್ರೆಸ್‌ನಲ್ಲಿದ್ದು, ಈಗ ಅದೇ ಸಂಸ್ಕೃತಿಯನ್ನು ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಡಿಕೆ, ಪಿಕೆ, ಬಿಕೆಗಳ ಗೂಂಡಾ ವರ್ತನೆಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ, ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ ಎಂದರು. ನಾನು ದಾವಣಗೆರೆಯಲ್ಲಿ ಮಾತನಾಡುವಾಗ ಬಾಯಿ ತಪ್ಪಿ ಒಂದು ಮಾತು ಹೇಳಿದ್ದಕ್ಕೆ ಕಾಂಗ್ರೆಸ್‌ನವರು ನನ್ನ ಮನೆಯ ಮುಂದೆ ಪೋಸ್ಟರ್ ಅಂಟಿಸಿದ್ದರು. ಆದರೆ ಈಗ ಅವರೇ ಚಾಕು, ಚೂರಿ ಕಳುಹಿಸುವ ಮೂಲಕ ತಮ್ಮ ಸಂಸ್ಕೃತಿ ಎಂತಹದ್ದು ಎಂಬುದನ್ನು ತೋರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಇತ್ತೀಚಿನ ನಡವಳಿಕೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಕಿಡಿಕಾರಿದರು. ಪ್ರಿಯಾಂಕ್ ಖರ್ಗೆ ಅವರು ಶಾಶ್ವತವಾಗಿ ಗೃಹ ಸಚಿವರಾಗಿಯೂ ಇರುವುದಿಲ್ಲ, ಶಾಸಕರಾಗಿಯೂ ಇರುವುದಿಲ್ಲ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾತನಾಡಬಹುದು ಎಂದು ಭಾವಿಸಬಾರದು. ಕೆಪಿಸಿಸಿ ಅಧ್ಯಕ್ಷರಾಗಲಿ ಅಥವಾ ಇತರ ನಾಯಕರಾಗಲಿ ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿ ಇರಬೇಕು. ಚಾಕು, ಚೂರಿ ಸಂಸ್ಕೃತಿಯನ್ನು ಬಿಟ್ಟು ಪ್ರಜಾಸತ್ತಾತ್ಮಕವಾಗಿ ರಾಜಕೀಯ ಎದುರಿಸಲಿ ಎಂದು ವಿಜಯೇಂದ್ರ ತಿರುಗೇಟು ನೀಡಿದರು.

ShareTweetSendShare
Join us on:

Related Posts

ಹೌದು ನಾನು ಬಲಿತ ದಲಿತನೇ: ರಾಜಧಾನಿಯಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಮುಂದೆಯೇ ಹೆಚ್‌ಡಿಕೆ ವಿರುದ್ಧ ಯುವ ಕಾಂಗ್ರೆಸ್ ಬ್ಯಾನರ್ ಅಸ್ತ್ರ!

ಹೌದು ನಾನು ಬಲಿತ ದಲಿತನೇ: ರಾಜಧಾನಿಯಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಮುಂದೆಯೇ ಹೆಚ್‌ಡಿಕೆ ವಿರುದ್ಧ ಯುವ ಕಾಂಗ್ರೆಸ್ ಬ್ಯಾನರ್ ಅಸ್ತ್ರ!

by Shwetha
November 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ತೀವ್ರ ವಾಕ್ಸಮರ ಇದೀಗ ಬೀದಿಗಿಳಿದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಭಾರೀ...

ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

by Shwetha
November 9, 2026
0

ನವದೆಹಲಿ: ಭಾರತೀಯ ರಾಜಕಾರಣದಲ್ಲಿ ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಮುನ್ನಡೆಸಿದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ರಾಜಕೀಯ ಪ್ರವೇಶದ ಹಿಂದಿನ ಅತ್ಯಂತ...

ಮೋದಿ ಆಡಳಿತದ 12 ವರ್ಷಗಳಲ್ಲಿ ದೇಶದ ವ್ಯವಸ್ಥೆಗೆ ಭಾರೀ ಹಾನಿ: ಸರ್ಕಾರ ಬದಲಾದರೂ ಸರಿಪಡಿಸಲು ದೀರ್ಘ ಸಮಯ ಬೇಕು ಎಂದ ಸೋನಿಯಾ ಗಾಂಧಿ!

ಮೋದಿ ಆಡಳಿತದ 12 ವರ್ಷಗಳಲ್ಲಿ ದೇಶದ ವ್ಯವಸ್ಥೆಗೆ ಭಾರೀ ಹಾನಿ: ಸರ್ಕಾರ ಬದಲಾದರೂ ಸರಿಪಡಿಸಲು ದೀರ್ಘ ಸಮಯ ಬೇಕು ಎಂದ ಸೋನಿಯಾ ಗಾಂಧಿ!

by Shwetha
November 9, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಜನರ ನಡುವಿನ ಒಗ್ಗಟ್ಟು, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ...

ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆ ಹಣದಿಂದ, ಹೀಗಾಗಿ ಅರಮನೆ ಸರ್ಕಾರದ್ದು: ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ- ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು!

ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆ ಹಣದಿಂದ, ಹೀಗಾಗಿ ಅರಮನೆ ಸರ್ಕಾರದ್ದು: ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ- ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು!

by Shwetha
November 9, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಮಾಲೀಕತ್ವದ ಕುರಿತು ರಾಜಮನೆತನ ಹಾಗೂ ಸರ್ಕಾರದ ನಡುವೆ ಆರಂಭವಾಗಿರುವ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಮೈಸೂರು ಅರಮನೆಯನ್ನು ರಾಜರು ಕಟ್ಟಿಸಿದ್ದು, ಅದು ನಮ್ಮ...

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಇವರು ಮಣ್ಣಿನ ಮಕ್ಕಳು ಅಂತಾ ನೇಗಿಲಿಂದ ಉಳುಮೆ ಮಾಡಿದವರಲ್ಲ, ಬರೀ ಜಾಗ ಹೊಡೆದವರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ!

by Shwetha
November 9, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ಮಾತಿನ ಸಮರ ದಿನದಿಂದ ದಿನಕ್ಕೆ ಮತ್ತಷ್ಟು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram