ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಮಾಲೀಕತ್ವದ ಕುರಿತು ರಾಜಮನೆತನ ಹಾಗೂ ಸರ್ಕಾರದ ನಡುವೆ ಆರಂಭವಾಗಿರುವ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಮೈಸೂರು ಅರಮನೆಯನ್ನು ರಾಜರು ಕಟ್ಟಿಸಿದ್ದು, ಅದು ನಮ್ಮ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಕೊಟ್ಟಿಲ್ಲ ಎಂಬ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ಹಾಗೂ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಾರಾಜರು ಅರಮನೆ ಕಟ್ಟಿಸಿದ್ದು ನಿಜವಾದರೂ, ಅದಕ್ಕೆ ಜನರ ತೆರಿಗೆ ಹಣವನ್ನೇ ಬಳಸಲಾಗಿದೆ. ಹೀಗಾಗಿ ಅರಮನೆಯು ಜನರಿಗೆ ಹಾಗೂ ಸರ್ಕಾರಕ್ಕೆ ಸೇರಿದ್ದು ಎಂದು ಅವರು ತಮ್ಮ ವಾದವನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಜನರ ಟ್ಯಾಕ್ಸ್ ಹಣದಿಂದಲೇ ಇಷ್ಟು ದೊಡ್ಡ ಅರಮನೆ ನಿರ್ಮಾಣ ಸಾಧ್ಯವಾಗಿದ್ದು!
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಗೆ ನೇರ ತಿರುಗೇಟು ನೀಡಿದರು. ಅರಮನೆಯನ್ನು ಮಹಾರಾಜರೇ ಕಟ್ಟಿಸಿದ್ದು ಹೌದು, ಆದರೆ ಅದನ್ನು ಕಟ್ಟಿಸಲು ಅವರಿಗೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಅಂದು ಅರಮನೆ ನಿರ್ಮಾಣಕ್ಕೆ ಬಳಕೆಯಾದ ಪ್ರತಿಯೊಂದು ರೂಪಾಯಿಯೂ ಜನರು ನೀಡಿದ ತೆರಿಗೆ ಹಣದಿಂದಲೇ ಬಂದಿದೆ. ಜನರ ಬೆವರಿನ ಟ್ಯಾಕ್ಸ್ ಹಣದಿಂದಲೇ ರಾಜರಿಗೆ ಇಂತಹ ಬೃಹತ್ ಹಾಗೂ ಭವ್ಯವಾದ ಅರಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗಿದೆ. ಆದ್ದರಿಂದ ಈ ಅರಮನೆ ಸೇರಿದಂತೆ ಎಲ್ಲವೂ ಅಂತಿಮವಾಗಿ ಜನರಿಗೆ ಸೇರಬೇಕು ಹಾಗೂ ಅದು ಸರ್ಕಾರದ ಸ್ವತ್ತು ಎಂದು ಖಡಕ್ ಆಗಿ ಹೇಳಿದರು.
ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದಿಲ್ಲ: ಬಾಡಿಗೆಯೂ ಒಂದೇ, ಗೌರವ ಧನವೂ ಒಂದೇ!
ಇದೇ ವೇಳೆ ತಮ್ಮ ಹಿಂದಿನ ಹೇಳಿಕೆಯ ಕುರಿತು ಎದ್ದಿರುವ ವಿವಾದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ನಾನು ರಾಜಮನೆತನದ ಸಿಂಹಾಸನ ಆಗಲಿ ಅಥವಾ ಚಿನ್ನದ ಅಂಬಾರಿ ಆಗಲಿ ಸರ್ಕಾರದ್ದು ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ದಸರಾ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗುವ ಹಣದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಸರ್ಕಾರದಿಂದ ಅದಕ್ಕೆ ಬಾಡಿಗೆ ಕೊಡುತ್ತಿದ್ದೇವೆ, ಆದರೆ ರಾಜಮನೆತನದವರು ಅದನ್ನು ಗೌರವ ಧನ ಎಂದು ಕರೆಯುತ್ತಿದ್ದಾರೆ. ಬಾಡಿಗೆ ಎಂದರೂ, ಗೌರವ ಧನ ಎಂದರೂ ಎರಡರ ಅರ್ಥವೂ ಒಂದೇ ಆಗಿದೆ ಎಂದು ಮಾರ್ಮಿಕವಾಗಿ ನುಡಿದರು.
ದಸರಾ ಗೊಂದಲಕ್ಕೆ ತೆರೆ ಎಳೆಯುವ ವಿಶ್ವಾಸ
ನಾಡಹಬ್ಬ ದಸರಾ ಆಚರಣೆಯ ಪರಂಪರೆಯ ಕುರಿತು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಪ್ರತಿ ವರ್ಷವೂ ರಾಜಮನೆತನದವರು ಹಾಗೂ ಸರ್ಕಾರದ ನಡುವಿನ ಪರಸ್ಪರ ಸಾಮರಸ್ಯ ಮತ್ತು ಸಹಕಾರದಲ್ಲಿಯೇ ದಸರಾ ಹಬ್ಬವು ಯಶಸ್ವಿಯಾಗಿ ನಡೆಯುತ್ತದೆ. ಆದರೆ ಈ ವರ್ಷ ಮಾತ್ರ ಕೆಲವು ಹೇಳಿಕೆಗಳಿಂದಾಗಿ ಸ್ವಲ್ಪ ಮಟ್ಟಿನ ಗೊಂದಲಗಳು ಉಂಟಾಗಿವೆ ಎಂದು ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆ ಈ ಕುರಿತು ಮಾತುಕತೆ ನಡೆಸಿ, ಎಲ್ಲಾ ಸಮಸ್ಯೆಗಳನ್ನೂ ಸುಖಾಂತ್ಯವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.








