ಚಂದ್ರು ಸಾವು ಪ್ರಕರಣ – ವಿನಯ್ ಗುರೂಜಿಯಿಂದ ಮಾಹಿತಿ ಕಲೆ ಹಾಕಿದ ತನಿಖಾ ತಂಡ…
ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೇ ಪ್ರಕರಣಕ್ಕೆ ತನಿಖೆ ನಡೆಸುತ್ತಿರುವ ಪೊಲೀಸರು ಚಿಕ್ಕಮಗಳೂರು ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
25 ವರ್ಷದ ಚಂದ್ರಶೇಖರ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತ ಕಿರಣ್ ಜೊತೆ ರಾತ್ರಿ ಹೊತ್ತು ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ತಡರಾತ್ರಿ ಕಾರಿನಲ್ಲಿ ಹೊರಟ ಚಂದ್ರಶೇಖರ್ ಕಿರಣ್ ನನ್ನು ಶಿವಮೊಗ್ಗದಲ್ಲಿ ಕಾರಿನಿಂದ ಇಳಿಸಿ ದಾವಣಗೆರೆಯ ಹೊನ್ನಾಳಿಯತ್ತ ಒಬ್ಬರೇ ಹೊರಟಿದ್ದರು. ಈ ಹಿನ್ನಲೆಯಲ್ಲಿ ಚನ್ನಗಿರಿ ಪಿಎಸ್ಐ ನೇತೃತ್ವದ ನಾಲ್ವರ ತಂಡ ಆಶ್ರಮಕ್ಕೆ ಭೇಟಿ ಕೊಟ್ಟಿದೆ. ಪ್ರಕರಣ ಸಂಬಂಧ ಈವರೆಗೂ 4 ಬಾರಿ ಪೊಲೀಸರು ಭೇಟಿ ನೀಡಿದ್ದಾರೆ.
ಶಾಸಕ ರೇಣುಕಾಚಾರ್ಯ ಮತ್ತು ಕುಟುಂಬಸ್ಥರು ಕಾರು ಅಪಘಾತಕ್ಕೀಡಾಗಿದ್ದಲ್ಲ, ವ್ಯವಸ್ಥಿತ ಸಂಚು ನಡೆಸಿ ಚಂದ್ರಶೇಖರ್ ನನ್ನು ಕೊಲೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದು ನಿನ್ನೆ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಗುರೂಜಿ ಬಳಿ ಹೇಳಿಕೆ ಮತ್ತು ಮಾಹಿತಿ ಸಂಗ್ರಹಿಸಿದ್ದಾರೆ.
ಪೊಲೀಸರು ಕೇಳಿದ ಪ್ರಶ್ನೆಗಳಿಗೆಲ್ಲಾ ವಿನಯ್ ಗುರೂಜಿಯವರು ಉತ್ತರಿಸಿದ್ದು, ಆಶ್ರಮಕ್ಕೆ ರಾತ್ರಿ ಹೊತ್ತು ಬಂದಿದ್ದರು, ಅವರಲ್ಲಿ ಹೆಚ್ಚು ಮಾತನಾಡಿರಲಿಲ್ಲ. ಇಷ್ಟು ತಡವಾಗಿ ಏಕೆ ಬಂದಿರಿ, ಇದು ಬರುವ ಹೊತ್ತೇ ಎಂದು ಕೇಳಿದ್ದೆ. ಹುಷಾರಾಗಿ ಹೋಗಿ ಎಂದು ಹೇಳಿ ಕಳುಹಿಸಿದ್ದೆ, ಘಟನೆ ಬಗ್ಗೆ ನನಗೂ ನೋವಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಚಂದ್ರು ಪೋಸ್ಟ್ಮಾರ್ಟಂ ವರದಿ ಹಾಗೂ ಎಫ್ಎಸ್ಎಲ್ ರಿಪೋರ್ಟ್ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ. ಆನಂತರ ಇದು ಅಪಘಾತವೇ ಅಥವಾ ಕೊಲೆಯೇ ಎಂಬುದು ತಿಳಿದು ಬರಲಿದೆ.
Vinay Guruji: Chandru death case – Investigative team fabricated information from Vinay Guruji…








