ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ತಹಸೀಲ್ದಾರ್ ವರ್ಷಾ ಒಡೆಯರ್ (Varsha)
ಲಂಚ ಸ್ವೀಕರಿಸುತ್ತಿದ್ದ ಕಂದಾಯ ಇಲಾಖೆಯ ಮಹಿಳಾ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಯಲಹಂಕ ಸ್ಪೆಷಲ್ ತಹಸೀಲ್ದಾರ್ ಆಗಿರುವ ವರ್ಷಾ ಒಡೆಯರ್ ಜಮೀನಿನ ಖಾತೆ ಬದಲಾವಣೆಗೆ 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಬಳಿಕ ತಮ್ಮ ಕಚೇರಿಗೆ ಅರ್ಜಿದಾರನನ್ನು ಕರೆಯಿಸಿಕೊಂಡು ಖಾತೆ ಮಾಡಿಕೊಡಲು ಬ್ರೋಕರ್ ರಮೇಶ್ ಮೂಲಕ ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.
ಇವರು ಮೈಸೂರು ಬ್ಯಾಂಕ್ (Mysore Bank) ಬಳಿಯ ಕಂದಾಯ ಭವನದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರು ಲಗ್ಗೆ ಇಟ್ಟಿದ್ದಾರೆ.

ಮಂಗಳವಾರ ಸಂಜೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಸಂದರ್ಭದಲ್ಲಿ ವರ್ಷಾ ಒಡೆಯರ್ ಅವರು ತಬ್ಬಿಬ್ಬಾದರು ಎನ್ನಲಾಗಿದೆ.
ವಿಶೇಷ ತಹಸೀಲ್ದಾರರ ಕಚೇರಿ ಪರಿಶೀಲನೆ, ತಪಾಸಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಹಸೀಲ್ದಾರ್ ಮತ್ತು ಬ್ರೋಕರ್ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ದಾಸನಪುರ ಹೋಬಳಿಯ ಕೆಂಗನಹಳ್ಳಿಯ ನಿವಾಸಿ ಕಾಂತರಾಜು, ತನಗೆ ಸೇರಿದ ಜಮೀನಿನ ಖಾತೆಯಲ್ಲಿ ಹೆಸರು ಬದಲಾಗಿದೆ. ಅದನ್ನು ಸರಿ ಮಾಡಿಕೊಡುವಂತೆ ವಿಶೇಷ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.








